ಬಂಧನ
(ಪ್ರಾತಿನಿಧಿಕ ಚಿತ್ರ)
ಚಿಕ್ಕೋಡಿ: 2020ರಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರಿಗೆ ಜೀವಾವಧಿ ಶಿಕ್ಷೆ ಹಾಗೂ ₹1.40 ಲಕ್ಷ ದಂಡ ವಿಧಿಸಿ ಇಲ್ಲಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
ನಿಪ್ಪಾಣಿ ತಾಲ್ಲೂಕಿನ ಹಂಚಿನಾಳ ಕೆ.ಎಸ್. ಗ್ರಾಮದಲ್ಲಿ ನಡೆದಿದ್ದ ಸಚಿನ ಭೋಪಳೆ (37) ಹತ್ಯೆ ಪ್ರಕರಣದಲ್ಲಿ ಮೃತನ ಪತ್ನಿ ಅನಿತಾ ಭೋಪಳೆ (35), ಪತ್ನಿ ಸಹೋದರ ಕೃಷ್ಣಾತ ಘಾಟಗೆ (32), ವನಿತಾ ಚವ್ಹಾಣ (29), ಗಣೇಶ ರೇಡೆಕರ (21) ಶಿಕ್ಷೆಗೆ ಒಳಗಾಗಿದ್ದಾರೆ.
ಸಚಿನ ಭೋಪಳೆ ತನ್ನ ಪತ್ನಿ ಅನಿತಾ ಭೋಪಳ ಮೇಲೆ ಹಲ್ಲೆ ನಡೆಸಿ, ಹಿಂಸೆ ನೀಡುತ್ತಿದ್ದ. ಇದೇ ಕಾರಣಕ್ಕೆ ಅವನನ್ನು ಬಡಿಗೆಯಿಂದ ಹೊಡೆದು, ಕೈಕಾಲು ಕಟ್ಟಿ, ಕುತ್ತಿಗೆಗೆ ಉರುಳು ಹಾಕಿ ಕೊಲೆ ಮಾಡಲಾಗಿತ್ತು. ಜೆಸಿಬಿ ಮೂಲಕ ಗುಂಡಿ ತೋಡಿ, ಶವ ಹೂಳಲು ಯತ್ನಿಸಿ ಸಾಕ್ಷ್ಯ ನಾಶ ಮಾಡಲು ಯತ್ನಿಸಲಾಗಿತ್ತು. ಜೆಸಿಬಿ ಚಾಲಕ ಸುನೀಲ ರಾಠೋಡ ಇದನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದರು.
ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಾಕ್ಷ್ಯಾಧಾರ ಪರಿಗಣಿಸಿ ನ್ಯಾಯಾಧೀಶ ತಾರಕೇಶ್ವರಗೌಡ ಪಾಟೀಲ ಅವರು ತೀರ್ಪು ನೀಡಿದರು. ಸರ್ಕಾರಿ ಅಭಿಯೋಜಕ ವೈ.ಜಿ. ತುಂಗಳ ವಾದ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.