ಚಿಕ್ಕೋಡಿ: ಇಲ್ಲಿನ ಬಿಇಒ ಕಚೇರಿ ಆವರಣದಲ್ಲೇ ಇರುವ ಸರ್ಕಾರಿ ಶಾಲೆಗಳು ಮೂಲಸೌಕರ್ಯದಿಂದ ಬಳಲುತ್ತಿವೆ. 795 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವ ಶಾಲಾ ಆವರಣ ಮಳೆಯಿಂದಾಗಿ ಕೆಸರುಗದ್ದೆಯಾಗಿದೆ.
415 ವಿದ್ಯಾರ್ಥಿಗಳ ಸರ್ಕಾರಿ ಪ್ರೌಢ ಶಾಲೆ, 260 ವಿದ್ಯಾರ್ಥಿಗಳ ಶಾಸಕರ ಮಾದರಿ ಶಾಲೆ, 120 ವಿದ್ಯಾರ್ಥಿಗಳಿರುವ ಉರ್ದು ಪ್ರಾಥಮಿಕ ಶಾಲೆಗಳು ಒಂದೇ ಆವರಣದಲ್ಲಿವೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಶಿಕ್ಷಕರ ತರಬೇತಿ ಕೇಂದ್ರ (ಡಯಟ್ ಕಚೇರಿ), ಕ್ಷೇತ್ರ ಸಂಪನ್ಮೂಲ ಕಚೇರಿ, ಸಾರ್ವಜನಿಕ ಗ್ರಂಥಾಲಯ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲ್ಲೂಕು ಕಚೇರಿಗಳು ಈ ಆವರಣದಲ್ಲೇ ಕಾರ್ಯನಿರ್ವಹಿಸುತ್ತಿವೆ.
ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗುವ ಶಾಲಾ ಮೈದಾನದಲ್ಲಿ ಶಾಲಾ ಮಕ್ಕಳು ಆಟವಾಡುವುದು ಒತ್ತಟ್ಟಿಗರಲಿ, ತಿರುಗಾಡುವುದಕ್ಕೂ ಆಗದಂತಹ ಪರಿಸ್ಥಿತಿ ಇದೆ. ಕಚೇರಿಗೆ ಆಗಮಿಸುವ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೂ ಈ ಪರದಾಟ ತಪ್ಪಿದ್ದಲ್ಲ.
ಇದರ ಪ್ರತ್ಯಕ್ಷ ವರದಿ ಮಾಡಲು ‘ಪ್ರಜಾವಾಣಿ’ ಪ್ರತಿನಿಧಿ ತೆರಳಿದ ಸಂದರ್ಭದಲ್ಲೇ ಶಿಕ್ಷಕಿಯೊಬ್ಬರು ಸ್ಕೂಟಿ ಚಲಾಯಿಸುವಾಗ ಜಾರಿ ಬಿದ್ದರು. ಮೈದಾನದಲ್ಲಿದ್ದ ಶಿಕ್ಷಕರು ಹಾಗೂ ಮಕ್ಕಳು ಅವರಿಗೆ ಸಹಾಯ ಮಾಡಿದರು. ಹೀಗೆಯೇ, ಹಲವಾರು ಜನರು ಮೈದಾನದಲ್ಲಿ ಬಿದ್ದು ಗಾಯಗೊಂಡಿರುವ ಘಟನೆ ಹಲವು ಬಾರಿ ನಡೆದಿದೆ.
ಕೆಸರು ಗದ್ದೆಯಂತಾದ ಮೈದಾನದಲ್ಲೇ ಮಕ್ಕಳು ಆಟವಾಡುತ್ತಾರೆ. ಹೀಗಾಗಿ ನೆಗಡಿ, ಜ್ವರ ಸೇರಿದಂತೆ ವಿವಿಧ ಕಾಯಿಲೆಗಳು ಬರುವ ಸಾಧ್ಯತೆ ಇದೆ. ಶಾಸಕ ಗಣೇಶ ಹುಕ್ಕೇರಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಶೀಘ್ರವೇ ಈ ಸಮಸ್ಯೆಗೆ ಪರಿಹಾರ ಕಲ್ಪಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಪಾಲಕರ ಆಗ್ರಹ.
ಶಾಲೆ ಮೈದಾನ ದುರಸ್ತಿ ಮಾಡುವಂತೆ ಶಾಸಕ ಗಣೇಶ ಹುಕ್ಕೇರಿ ಹಾಗೂ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಸ್ಪಂದಿಸುವ ವಿಶ್ವಾಸವಿದೆಪಿ.ಎಂ. ಮಕಾನದಾರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ
ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಲಾಗಿದೆ. ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದಾರೆಪ್ರಭಾವತಿ ಪಾಟೀಲ ಕ್ಷೇತ್ರ ಶಿಕ್ಷಣಾಧಿಕಾರಿ
ಜಿಗುಟು ಮಣ್ಣಿನಲ್ಲಿ ಸರ್ಕಸ್ ಗುಡ್ಡದ ಇಳಿಜಾರು ಪ್ರದೇಶದಲ್ಲಿ ಶಾಲೆ ಮೈದಾನವಿದೆ. ಇಲ್ಲಿ ಜಿಗುಟು ಮಣ್ಣು ಹೆಚ್ಚಾಗಿದೆ. ಹೀಗಾಗಿ ಒಂದಿಷ್ಟು ಮಳೆಯಾದರೆ ಸಾಕು ಓಡಾಡಲು ಆಗದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದರೂ ಯಾರೂ ಕಣ್ಣೆತ್ತಿ ನೋಡಿಲ್ಲ. ಕೆಲವು ವರ್ಷಗಳ ಹಿಂದೆ ಶಾಲಾ ಮೈದಾನದಲ್ಲಿ ಒಂದಿಷ್ಟು ಗರಸು ಹಾಕಲಾಗಿದ್ದರೂ ಅದರ ಮೇಲೆ ಮತ್ತೆ ಮಣ್ಣು ಸಂಗ್ರಹವಾಗಿದೆ. ಹೀಗಾಗಿ ಮಳೆ ಬಂದಲ್ಲಿ ಮೈದಾನ ಮತ್ತೆ ಕೆಸರು ಗದ್ದೆಯಾಗುತ್ತಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಈ ಕುರಿತು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜವಾಗಿಲ್ಲ ಎಂಬುದು ಶಿಕ್ಷಕರ ಅಳಲು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.