ADVERTISEMENT

ಬಿಜೆಪಿಗೆ ತಲೆನೋವಾದ ಚಿಕ್ಕೋಡಿ, ಸಂಸದ ಪ್ರಕಾಶ ಹುಕ್ಕೇರಿಗೆ ಒಳಗೊಳಗೇ ವಿರೋಧ

ಎಂ.ಮಹೇಶ
Published 17 ಮಾರ್ಚ್ 2019, 20:14 IST
Last Updated 17 ಮಾರ್ಚ್ 2019, 20:14 IST
   

ಬೆಳಗಾವಿ: ಇಲ್ಲಿನ ಚಿಕ್ಕೋಡಿ ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಹೆಚ್ಚಿನ ಆಕಾಂಕ್ಷಿಗಳಿರುವುದು ಪಕ್ಷದ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.

ಕ್ಷೇತ್ರದಲ್ಲಿ ಒಮ್ಮೆ ಗೆದ್ದು (2009ರಲ್ಲಿ), 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಎದುರು 3,003 ಮತಗಳ ಕಡಿಮೆ ಅಂತರದಿಂದ ಸೋತಿದ್ದ ರಮೇಶ ಕತ್ತಿ ಪ್ರಮುಖ ಆಕಾಂಕ್ಷಿಯಾಗಿದ್ದಾರೆ.

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾಗಿರುವ ಉದ್ಯಮಿ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಹಾಗೂ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷರೂ ಆಗಿರುವ ಪ್ರಭಾಕರ ಕೋರೆ ಮತ್ತು ಮಾಜಿ ಶಾಸಕ, ಬಿಜೆಪಿಯ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಲಕ್ಷ್ಮಣ ಸವದಿ ಕೂಡ ಟಿಕೆಟ್‌ ಆಕಾಂಕ್ಷಿಗಳು. ‘ಜನರಿಂದ ಆಯ್ಕೆಯಾಗಬೇಕು’ ಎನ್ನುವ ಉತ್ಕಟ ಬಯಕೆ ಹೊಂದಿರುವ ಕೋರೆ, ‘ಸ್ಪರ್ಧಿಸುವ ಮನಸ್ಸಿದೆ; ಟಿಕೆಟ್‌ ಬಯಸಿದ್ದೇನೆ’ ಎಂದು ಹಲವು ತಿಂಗಳುಗಳಿಂದ ಹೇಳುತ್ತಲೇ ಬಂದಿದ್ದಾರೆ. ಹೀಗಾಗಿ, ಅಭ್ಯರ್ಥಿ ಆಯ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ADVERTISEMENT

ಒಳ ಏಟಿನ ಆತಂಕ: ರಮೇಶ ಕತ್ತಿ ಅವರು ಪಕ್ಷದ ಪ್ರಭಾವಿ ನಾಯಕ, ಶಾಸಕರೂ ಆಗಿರುವ ಉಮೇಶ ಕತ್ತಿ ಸಹೋದರ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ) ಅಧ್ಯಕ್ಷರೂ ಹೌದು. ಈ ಸಹೋದರರಿಗೆ ಆ ಭಾಗದಲ್ಲಿರುವ ಕೆಲವು ಸಕ್ಕರೆ ಕಾರ್ಖಾನೆಗಳು ಹಾಗೂ ಸಹಕಾರ ಕ್ಷೇತ್ರದ ಮೇಲೆ ಬಿಗಿಯಾದ ಹಿಡಿತವಿದೆ. ಅಲ್ಲದೆ, ಹಿಂದಿನ ಎರಡೂ ಚುನಾವಣೆಯಲ್ಲಿ ರಮೇಶ ಕತ್ತಿ ಅವರ ಮತ ಗಳಿಕೆಯಲ್ಲಿ ಏರಿಕೆ ಕಂಡುಬಂದಿದೆ. ಈ ಕಾರಣದಿಂದಾಗಿ ಇಲ್ಲಿನ ಮುಖಂಡರು ಅವರಿಗೆ ಟಿಕೆಟ್‌ ಕೊಟ್ಟರೆ ಉತ್ತಮ ಎನ್ನುವ ಸಲಹೆಯನ್ನು ವರಿಷ್ಠರಿಗೆ ನೀಡಿದ್ದಾರೆ.

‘ರಮೇಶ ಕತ್ತಿ, ಅಣ್ಣಾಸಾಹೇಬ ಜೊಲ್ಲೆ ಹಾಗೂ ಪ್ರಭಾಕರ ಕೋರೆ ಅವರ ಹೆಸರು ಚರ್ಚೆಯಲ್ಲಿವೆ. ಲಕ್ಷ್ಮಣ ಸವದಿ ಅವರಿಗೆ ಅವಕಾಶ ಕಡಿಮೆ. ಹೈಕಮಾಂಡ್‌ ನಡೆಸಿರುವ ಸಮೀಕ್ಷೆಯ ‘ಫಲಿತಾಂಶ’ ನಮಗೆ ಗೊತ್ತಾಗಿಲ್ಲ. ಹಳಬರು ಯಾರೂ ಬೇಡ; ಹೊಸ ಅಭ್ಯರ್ಥಿಯನ್ನು ಹಾಕಬೇಕು ಎನ್ನುವ ಚರ್ಚೆಯೂ ನಡೆದಿದೆ. ಅಂತಿಮವಾಗಿ ಯಾರಿಗೇ ಟಿಕೆಟ್‌ ದೊರೆತರೂ, ಇತರ ಆಕಾಂಕ್ಷಿಗಳು ಮುನಿಸಿಕೊಳ್ಳುವುದು ನಿಶ್ಚಿತ. ಇದರ ಪರಿಣಾಮ ಫಲಿತಾಂಶದ ಮೇಲೆ ಬೀಳುವ ಸಾಧ್ಯತೆ ಇದೆ. ವರಿಷ್ಠರು ಇದನ್ನು ಹೇಗೆ ನಿಭಾಯಿಸುತ್ತಾರೆಯೋ ನೋಡಬೇಕು. ‘ಒಳೇಟುಗಳು’ ಬಿದ್ದರೆ ಪಕ್ಷಕ್ಕೆ ಮುಳುವಾಗುತ್ತದೆ’ ಎಂದು ಪಕ್ಷದ ಮುಖಂಡರೊಬ್ಬರು ಪ್ರತಿಕ್ರಿಯಿಸಿದರು.

ಪ್ರಕಾಶ ಕಂಗಾಲು: ಇನ್ನು, ಕಾಂಗ್ರೆಸ್‌ನಲ್ಲಿ ಹಾಲಿ ಸಂಸದ ಪ್ರಕಾಶ ಹುಕ್ಕೇರಿ ಬಿಟ್ಟರೆ ಬೇರೆ ಆಕಾಂಕ್ಷಿಗಳಿಲ್ಲ. ಪಕ್ಷದ ಜಿಲ್ಲಾ ಮುಖಂಡರಿಂದ ನಿರೀಕ್ಷಿತ ಸಹಕಾರ ದೊರೆಯುವುದೇ ಎನ್ನುವ ಗೊಂದಲದಲ್ಲಿ ಪ್ರಕಾಶ ಇದ್ದಾರೆ. ಕಾಂಗ್ರೆಸ್‌ ವರಿಷ್ಠರೊಂದಿಗೆ ಮುನಿಸಿಕೊಂಡಿರುವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಬೆಂಬಲಿಗರಾದ ಅಥಣಿ ಶಾಸಕ ಮಹೇಶ ಕುಮಠಳ್ಳಿ ಮತ್ತು ಕಾಗವಾಡದ ಶ್ರೀಮಂತ ಪಾಟೀಲ ಜೊತೆ ಹಾಲಿ ಸಂಸದರಿಗೆ ಉತ್ತಮ ಸಂಬಂಧವಿಲ್ಲ. ಜಾರಕಿಹೊಳಿ ನಡೆಯ ಮೇಲೆ ಹುಕ್ಕೇರಿ ಭವಿಷ್ಯ ಅವಲಂಬಿಸಿದೆ. ಒಳಗೊಳಗೇ ವಿರೋಧ ಇರುವುದರಿಂದ ಕಂಗಾಲಾಗಿರುವ ಅವರು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ! ಸ್ಪರ್ಧೆ ಬಗ್ಗೆ ಖಚಿತಪಡಿಸದೇ, ಮಾರ್ಮಿಕ ಹೇಳಿಕೆಗಳನ್ನು ನೀಡುತ್ತಾ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.