ಚಿಕ್ಕೋಡಿ: ಅಂತೂ ಇಲ್ಲಿನ ಗಣಪತಿ ಪೇಟೆ(ಗುರುವಾರ ಪೇಟೆ) ಮಾರುಕಟ್ಟೆ ಪ್ರದೇಶದ ರಸ್ತೆ ವಿಸ್ತರಣೆಗೆ ಕಾಲ ಕೂಡಿಬಂದಿದೆ. ರಸ್ತೆಗೆ ಹೊಂದಿಕೊಂಡಿದ್ದ ಆಸ್ತಿಗಳ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ.
ಇದೊಂದೇ ರಸ್ತೆ ವಿಸ್ತರಿಸಿದರೆ ಸಾಲದು. ಇದಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳ ರಸ್ತೆಗಳನ್ನು ವಿಸ್ತರಿಸಬೇಕು. ಜತೆಗೆ ಈ ರಸ್ತೆ ಬದಲಿಗೆ, ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಏಕಮುಖ ಸಂಚಾರಕ್ಕಷ್ಟೇ ಇಲ್ಲಿ ಅವಕಾಶ ಕಲ್ಪಿಸಬೇಕೆಂಬ ಆಗ್ರಹ ಜನರಿಂದ ಕೇಳಿಬರತೊಡಗಿದೆ.
40 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಚಿಕ್ಕೋಡಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿವೆ. ಆದರೆ, ಜನಸಂಖ್ಯೆಗೆ ಅನುಗುಣವಾಗಿ ಮಾರುಕಟ್ಟೆಗಳಿಲ್ಲ.
ಕಿತ್ತೂರು ಚನ್ನಮ್ಮ ಮಾರುಕಟ್ಟೆ, ಗಣಪತಿ ಪೇಟೆ, ಗಾಂಧಿ ಮಾರುಕಟ್ಟೆಗಳೇ ಜನರಿಗೆ ಆಧಾರವಾಗಿವೆ. ಈ ಪೈಕಿ ಗಾಂಧಿ ಮಾರುಕಟ್ಟೆಯು ಪ್ರತಿ ಗುರುವಾರ ನಡೆಯುವ ಸಂತೆಗೆ ಸೀಮಿತವಾಗಿದೆ. ಚನ್ಮಮ್ಮ ಮಾರುಕಟ್ಟೆಯು ಪಾರ್ಕಿಂಗ್ ಸೇರಿ ಎಲ್ಲ ಸೌಲಭ್ಯ ಹೊಂದಿದೆ.
75 ವರ್ಷಗಳ ಇತಿಹಾಸ ಹೊಂದಿದ ಗುರುವಾರ ಪೇಟೆಯಲ್ಲಿ ಪ್ರತಿ ಗುರುವಾರ ವಾರದ ಸಂತೆ ನಡೆಯುತ್ತಿತ್ತು. ಹಾಗಾಗಿ ಇದಕ್ಕೆ ‘ಗುರುವಾರ ಪೇಟೆ’ ಎಂಬ ಹೆಸರು ಬಂದಿದೆ. ಕೆಲವೇ ವರ್ಷಗಳ ಹಿಂದೆ ಇದಕ್ಕೆ ‘ಗಣಪತಿ ಪೇಟೆ’ ಎಂದು ಮರುನಾಮಕರಣ ಮಾಡಲಾಗಿದೆ.
1980ರ ದಶಕದಲ್ಲಿ ಗಾಂಧಿ ಮಾರುಕಟ್ಟೆಗೆ ವಾರದ ಸಂತೆ ಸ್ಥಳಾಂತರಗೊಂಡ ನಂತರ, ಕಿರಾಣಿ, ಚಿನ್ನಾಭರಣ, ಜವಳಿ ಸೇರಿದಂತೆ ಕೆಲವು ಅಂಗಡಿಗಳಲ್ಲೇ ಇಲ್ಲಿ ಉಳಿದಿವೆ. 20 ಅಡಿ ಇದ್ದ ರಸ್ತೆಗೆ ಹೊಂದಿಕೊಂಡೇ ವರ್ತಕರು ವ್ಯಾಪಾರ–ವಹಿವಾಟು ನಡೆಸಿಕೊಂಡು ಬಂದಿದ್ದಾರೆ.
ಈ ಮಾರ್ಗದಲ್ಲಿ ನಿತ್ಯ ಸಾವಿರಾರು ಜನರು ಸಂಚರಿಸುತ್ತಾರೆ. ಆದರೆ, ರಸ್ತೆ ಇಕ್ಕಟ್ಟಿನಿಂದ ಕೂಡಿದ ಕಾರಣ ವಾಹನಗಳ ಚಾಲಕರು ಮತ್ತು ಸವಾರರಿಗೆ ತೊಂದರೆಯಾಗುತ್ತಿತ್ತು. ಹಾಗಾಗಿ ಈ ರಸ್ತೆ ವಿಸ್ತರಿಸಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಇತ್ತು. ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧ–2 ಪ್ರಕಾಶ ಹುಕ್ಕೇರಿ ಪ್ರಯತ್ನದಿಂದ ಅದು ಈಗ ಸಾಕಾರವಾಗಿದೆ.
ರಸ್ತೆ ವಿಸ್ತರಣೆಗಾಗಿ ತೆರವು ಕಾರ್ಯಾಚರಣೆ ಆರಂಭಗೊಂಡಿದ್ದು, ಈಗಾಗಲೇ ಶೇ 40ರಷ್ಟು ತೆರವು ಕಾರ್ಯ ಪೂರ್ಣಗೊಂಡಿದೆ. ಒಂದು ವಾರದಲ್ಲಿ ಶೇ 100ರಷ್ಟು ಪ್ರಕ್ರಿಯೆ ಮುಗಿಯುವ ಸಾಧ್ಯತೆ ಇದೆ. ಮುಖ್ಯಮಂತ್ರಿ ವಿಶೇಷ ನಿಧಿಯಿಂದ ಗುರುವಾರ ಪೇಟೆಯ 151 ಆಸ್ತಿಗಳ ಮಾಲೀಕರಿಗೆ ಪರಿಹಾರವನ್ನೂ ನೀಡಲಾಗಿದೆ.
ತೆರವು ಕಾರ್ಯಾಚರಣೆಯಲ್ಲಿ ಹಲವು ವರ್ತಕರು ಪೂರ್ಣ ಆಸ್ತಿ ರಸ್ತೆ ಪಾಲಾಗಿಲ್ಲ. ರಸ್ತೆ ವಿಸ್ತರಣೆ ನಂತರವೂ ಉಳಿಯುವ ಜಾಗದಲ್ಲೇ ವ್ಯಾಪಾರ–ವಹಿವಾಟು ಮುಂದುವರಿಸಲು ಅವರು ಕಾತರರಾಗಿದ್ದಾರೆ.
ಆದರೆ, ತೆರವು ಕಾರ್ಯಾಚರಣೆ ಮುಗಿದ ತಕ್ಷಣ ರಸ್ತೆ, ಚರಂಡಿ ನಿರ್ಮಾಣ, ಭೂಗತ ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಂಡರೆ, ವರ್ತಕರಿಗೆ ಅನುಕೂಲವಾಗಲಿದೆ.
ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆಯಾಗಲಿ:
‘ಸಂಚಾರಕ್ಕೆ ಅನುಕೂಲವಾಗಲೆಂದು ಗುರುವಾರ ಪೇಟೆ ರಸ್ತೆಯನ್ನು 34 ಅಡಿಗೆ ವಿಸ್ತರಿಸಲಾಗುತ್ತಿದೆ. ಇದರಲ್ಲೇ ವರ್ತಕರು, ಸ್ಥಳೀಯರು ತಮ್ಮ ವಾಹನಗಳನ್ನು ನಿಲ್ಲಿಸಲು ಆರಂಭಿಸಿದರೆ ಮತ್ತೆ ಸಂಚಾರ ಸಮಸ್ಯೆ ತಲೆದೋರುತ್ತದೆ. ತೆರವು ಪ್ರಕ್ರಿಯೆ ಕೈಗೊಂಡಿದ್ದು ವ್ಯರ್ಥವಾಗುತ್ತದೆ. ಈ ಮಾರ್ಗದಲ್ಲಿನ ವರ್ತಕರು ಮತ್ತು ಸ್ಥಳೀಯರಿಗೆ ವಾಹನ ನಿಲುಗಡೆಗಾಗಿ ಪ್ರತ್ಯೇಕ ಅವಕಾಶ ಮಾಡಿಕೊಡಬೇಕು. ಇದಕ್ಕಾಗಿ ಖಾಲಿ ಜಾಗ ಹುಡುಕಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
‘ದ್ವಿಮುಖವಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ಆರಂಭಗೊಂಡರೂ ಚಾಲಕರಿಗೆ ಕಷ್ಟವಾಗುತ್ತದೆ. ಹಾಗಾಗಿ ಏಕಮುಖವಾಗಿ ಮಾತ್ರ ಇಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಆಗ ತೆರವು ಕಾರ್ಯಾಚರಣೆ ಕೈಗೊಂಡಿದ್ದು ಸಾರ್ಥಕವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರಸ್ತೆ ವಿಸ್ತರಿಸಿದರೆ ಸಂಚಾರ ಸಮಸ್ಯೆಯೂ ನೀಗುತ್ತದೆ’ ಎಂಬುದು ಅವರ ಅಭಿಪ್ರಾಯ.
ಯಾರು ಏನಂತಾರೆ...?
ಗುರುವಾರ ಪೇಟೆ ರಸ್ತೆ ವಿಸ್ತರಣೆ ಬೇಡಿಕೆ ಈಗ ಕೈಗೂಡಿದೆ. ವಿಸ್ತರಣೆಯಾದ ಜಾಗದಲ್ಲಿ ಬೇಗ ರಸ್ತೆ ನಿರ್ಮಿಸಿಕೊಟ್ಟರೆ ವ್ಯಾಪಾರ–ವಹಿವಾಟಿಗೆ ಅನುಕೂಲವಾಗುತ್ತದೆ ಸುಭಾಷ ಕವಲಾಪುರ ವ್ಯಾಪಾರಿ**** ಗುರುವಾರ ಪೇಟೆ ರಸ್ತೆ ವಿಸ್ತರಣೆಯಾಗುತ್ತಿರುವುದು ಖುಷಿ ತಂದಿದೆ. ಅಂತೆಯೇ ಸೋಮವಾರ ಪೇಟೆ ರಸ್ತೆಯನ್ನೂ ವಿಸ್ತರಿಸಬೇಕು
-ವಿರೂಪಾಕ್ಷ ಕಾಮಗೌಡ, ಸ್ಥಳೀಯ
ರಸ್ತೆ ವಿಸ್ತರಿಸಿ ತ್ವರಿತವಾಗಿ ಪರಿಹಾರವನ್ನೂ ಕೊಡಿಸಿರುವ ಜನಪ್ರತಿನಿಧಿಗಳ ಕಾರ್ಯ ಶ್ಲಾಘನೀಯ. ರಸ್ತೆ ವಿಸ್ತರಣೆಯಿಂದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ವಹಿಸಲಿ
-ಕೃಷ್ಣಾ ಪಾಲಂಕರ ವ್ಯಾಪಾರಿ
ಗುರುವಾರ ಪೇಟೆ ರಸ್ತೆ ವಿಸ್ತರಣೆಯಾದರೆ ಚಿಕ್ಕೋಡಿ ಪಟ್ಟಣ ಮತ್ತಷ್ಟು ಬೆಳೆಯಲು ಸಾಧ್ಯವಿದೆ. ವ್ಯಾಪಾರ ವಹಿವಾಟಿಗೂ ಅನುಕೂಲವಾಗುತ್ತದೆ. ವಾಹನ ಸಂಚಾರ ಸುಗಮವಾಗುತ್ತದೆ. ಹಾಗಾಗಿ ಆಸ್ತಿಗಳ ಮಾಲೀಕರ ಮನವೊಲಿಸಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಅವರಿಗೆ ಪರಿಹಾರ ಕೊಡಲಾಗಿದೆ
-ಪ್ರಕಾಶ ಹುಕ್ಕೇರಿ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2
ಗುರುವಾರ ಪೇಟೆ ರಸ್ತೆ ವಿಸ್ತರಣೆಯಿಂದ ಜನರಿಗೆ ಅನುಕೂಲವಾಗಲಿದೆ. ಬಸವೇಶ್ವರ ವೃತ್ತದಲ್ಲಿ ಆಗಾಗ ಉಂಟಾಗುವ ಸಂಚಾರ ಸಮಸ್ಯೆಗೆ ಕಡಿವಾಣ ಬೀಳಲಿದೆ
-ಸುಭಾಷ ಸಂಪಗಾಂವಿ, ಉಪವಿಭಾಗಾಧಿಕಾರಿ ಚಿಕ್ಕೋಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.