ADVERTISEMENT

‘ಗಾಳಿ ಕಲುಷಿತವಾದರೆ ಮನುಕುಲ ಉಳಿಯೋಲ್ಲ’

ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 10:54 IST
Last Updated 19 ನವೆಂಬರ್ 2019, 10:54 IST
ಬೆಳಗಾವಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಮಂಗಳವಾರ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಕಾರ್ಯಕ್ರಮವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಡಾ.ಪಿ.ಎಂ. ಪಾಟೀಲ ಹಾಗೂ ಅಧಿಕಾರಿಗಳು ಉದ್ಘಾಟಿಸಿದರು
ಬೆಳಗಾವಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಮಂಗಳವಾರ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಕಾರ್ಯಕ್ರಮವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಡಾ.ಪಿ.ಎಂ. ಪಾಟೀಲ ಹಾಗೂ ಅಧಿಕಾರಿಗಳು ಉದ್ಘಾಟಿಸಿದರು   

ಬೆಳಗಾವಿ: ‘ನೈಸರ್ಗಿಕ ಸಂಪತ್ತು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಉಸಿರಾಡುವ ಗಾಳಿ ಕಲುಷಿತಗೊಂಡರೆ ಮನುಕುಲಕ್ಕೆ ಉಳಿಗಾಲವಿಲ್ಲ. ಹೀಗಾಗಿ, ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಬೆಳೆಸಬೇಕು. ಪರಿಸರ ಕಾಪಾಡಿಕೊಳ್ಳಬೇಕು’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಡಾ.ಪಿ.ಎಂ. ಪಾಟೀಲ ಹೇಳಿದರು.

ಇಲ್ಲಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಮಂಗಳವಾರ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಗ್ರಾಮೀಣ ಪ್ರದೇಶಗಳನ್ನು ಹೊರತುಪಡಿಸಿ, ನಗರ ಮತ್ತು ಪಟ್ಟಣಗಳಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಾಹನಗಳು ಮಾಲಿನ್ಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿವೆ. ನಗರಗಳಲ್ಲಿ ಅತಿಹೆಚ್ಚಿನ ವಾಹನಗಳ ಬಳಕೆಯಾಗುತ್ತಿದೆ. ಇದರಿಂದ ಹೊರಬರುವ ಮಲಿನ ಗಾಳಿ ಜನರ ಆರೋಗ್ಯದ ಮೇಲೆ ಭೀಕರ ಪರಿಣಾಮ ಬೀರುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ನಮ್ಮ ಆರೋಗ್ಯ ಉಸಿರಾಡುವ ಗಾಳಿ ಮತ್ತು ಆಹಾರದ ಗುಣಮಟ್ಟವನ್ನು ಅವಲಂಬಿಸಿದೆ. ಮನುಕುಲದ ಭವಿಷ್ಯದ ದೃಷ್ಟಿಯಲ್ಲಿ ವಾಯು ಮಾಲಿನ್ಯ ತಡೆಗಟ್ಟುವುದು ಅತ್ಯಗತ್ಯವಾಗಿದೆ. ಜೊತೆಗೆ, ವಾಹನ ಸವಾರರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ, ಅಪಘಾತ ತಗ್ಗಿಸಲು ಸಾಧ್ಯವಿದೆ’ ಎಂದರು.

ಜಾಗೃತಿ ಮೂಡಿಸಬೇಕು: ಜಂಟಿ ಸಾರಿಗೆ ಆಯುಕ್ತ ಜೆ. ಪುರುಷೋತ್ತಮ ಮಾತನಾಡಿ, ‘ಸಾರ್ವಜನಿಕರಿಗೆ ವಾಯು ಮಾಲಿನ್ಯ ಅರಿವು ಜಾಗೃತಿ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು. ನವದೆಹಲಿಯಲ್ಲಿ ಅಧಿಕ ವಾಯು ಮಾಲಿನ್ಯದಿಂದಾಗಿ ಪ್ರತಿಯೊಬ್ಬರೂ ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಓಡಾಡುವ ಸಂದರ್ಭ ಎದುರಾಗಿದೆ. ಆ ಅಪಾಯಕಾರಿ ವಾತಾವರಣ ಇಲ್ಲಿಯೂ ನಿರ್ಮಾಣವಾಗದಂತೆ ಎಚ್ಚರ ವಹಿಸಬೇಕು. ವಾಹನಗಳನ್ನು 6 ತಿಂಗಳಿಗೊಮ್ಮೆ ಸರ್ವಿಸ್ ಮಾಡಿಸಬೇಕು. ಪರಿಸರದಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ಮ ಮಾತನಾಡಿ, ‘ನಮಗೆ ಜೀವದಾನವಾಗಿರುವ ಓಝೋನ್‌ ಪದರ ನಾಶವಾಗದಂತೆ ಸುರಕ್ಷಿತವಾಗಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ. ಹಳೆ ವಾಹನಗಳಿಗೆ ಏರ್ ಕ್ಲೀನರ್‌ ಮಾಡಿಸಬೇಕು. ವಿಷಪೂರಿತ ಗಾಳಿ ಹರಡದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

ನಿಯಮಗಳು ಪ್ರಕಟ: ‘ವಾಹನಗಳು ಹೈಡ್ರೋಕಾರ್ಬನ್‌ ಆಧಾರಿತ ಪೆಟ್ರೋಲ್ ಹಾಗೂ ಡೀಸೆಲ್ ಇಂಧನವನ್ನು ದಹಿಸಿಯೇ ಓಡುವುದರಿಂದ ಪರಿಸರದಲ್ಲಿ ಹೆಚ್ಚಿನ ಮಾಲಿನ್ಯ ಉಂಟಾಗುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ ಇಂಧನಗಳು ಭವಿಷ್ಯದಲ್ಲಿ ಒಂದಲ್ಲ ಒಂದು ದಿನ ಬರಿದಾಗುವ ಇಂಧನ ಮೂಲಗಳಾಗಿವೆ. ಹೀಗಾಗಿಯೇ, ಪರಿಸರ ಮತ್ತು ಶಬ್ದ ಮಾಲಿನ್ಯ ರಹಿತವಾಗಿರುವ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಸರ್ಕಾರ ಉತ್ತೇಜನ ನೀಡುತ್ತಿದೆ. 2020ರ ಏ. 1ರಿಂದ ‘ಬಿಎಸ್–06’ ವಾಹನಗಳಿಗೆ ಮಾತ್ರ ನೊಂದಣಿಗೆ ಅವಕಾಶವಾಗುವಂತೆ ನಿಯಮಗಳನ್ನು ಸರ್ಕಾರ ಈಗಾಗಲೇ ಪ್ರಕಟಿಸಿದೆ’ ಎಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಭೀಮಗೌಡ ಪಾಟೀಲ, ಹಿರಿಯ ಮೋಟಾರು ವಾಹನ ನಿರೀಕ್ಷಕ ಸಾಧಿಕ್‌ ಷರೀಫ್‌, ಹಿರಿಯ ಮೋಟಾರು ವಾಹನ ನಿರೀಕ್ಷಕ ತ್ಯಾಗರಾಜು, ಮೋಟಾರು ವಾಹನ ನಿರೀಕ್ಷಕ ಓಂಪ್ರಕಾಶ ಆಡಿನ, ಎಸ್.ಕೆ. ಹುಗ್ಗಿ, ಜಿ.ಎಸ್. ಕುಂಗಾರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.