ಬೆಳಗಾವಿ: ‘ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳ ಭೂ ಕಂದಾಯ ದಾಖಲಾತಿಗಳನ್ನು ತೋಟಗಾರಿಕೆ ಇಲಾಖೆಯ ಹೆಸರಿಗೆ ವರ್ಗಾಯಿಸಿಕೊಳ್ಳಲು, ಆಯಾ ತಹಶೀಲ್ದಾರ್ ಕಚೇರಿ, ಉಪವಿಭಾಗ ಅಧಿಕಾರಿ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ನಿರ್ದೇಶನ ನೀಡಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯ ತೋಟಗಾರಿಕೆ ಅಭಿವೃದ್ಧಿ ಏಜೆನ್ಸಿ (ಕೆಎಸ್‌ಎಚ್‌ಡಿಎ) ಯೋಜನೆಯ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಎಲ್ಲ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಗುಣಮಟ್ಟದ ಹಣ್ಣಿನ ಕಸಿ ಮಾಡುವುದು, ಸಸಿಗಳನ್ನು ಉತ್ಪಾದಿಸುವ ಕೆಲಸ ವೇಗಗೊಳಿಸಿ, ಅವುಗಳನ್ನು ರೈತರಿಗೆ ವಿತರಿಸಬೇಕು. ನೀವು ಮಾಡುವ ಕೆಲಸ ಇಲಾಖೆಗೆ ಮಾತ್ರವಲ್ಲ; ರೈತರಿಗೇ ಅನುಕೂಲಕರ ಆಗಿರಬೇಕು’ ಎಂದರು.
ಸಭೆಗೆ ಮಾಹಿತಿ ನೀಡಿದ ತೋಟಗಾರಿಕೆ ಉಪನಿರ್ದೇಶಕ ಮಾಹಾಂತೇಶ ಮುರಗೋಡ, ‘2024–25ನೇ ಸಾಲಿನ ಪ್ರಗತಿಯನ್ನು ಸಭೆಗೆ ವಿವರಿಸಿದ ಅವರು, 2025–26ನೇ ಸಾಲಿನ ಕ್ರಿಯಾ ಯೋಜನೆ ಕ್ಷೇತ್ರದಲ್ಲಿ ಆಗಬೇಕಾದ ಮೂಲಭೂತ ಸೌಕರ್ಯದ ಬಗ್ಗೆ ವಿವರಣೆ ನೀಡಿದರು. ‘ಅನುದಾನದ ಮೂಲದೊಂದಿಗೆ ಪ್ರಸ್ತಾವ ಸಲ್ಲಿಸಿ ಅನುಮೋದಿಸಿಕೊಂಡು, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದೂ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಪ್ರೊ.ದಿಲೀಪ ಮಸೂತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್.ಡಿ. ಕೋಳೇಕರ, ಪಶುಪಾಲನಾ ಇಲಾಖೆ ಉಪನಿರ್ದೇಶಕ ರವಿ ಸಾಲಿಗೌಡರ, ರೇಷ್ಮೆ ಇಲಾಖೆ ಉಪನಿರ್ದೇಶಕ ಮಹೇಶ ಕುಮಾರ ವಾಗೆ, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಸಂತೋಷ ಕೊಪ್ಪದ, ಕೃಷಿ ಮಾರುಕಟ್ಟೆ ಎಂ.ಡಿ. ಚಬನೂರು, ಕೈಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎ.ಐ. ಪಠಾನ ಮತ್ತು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ರಾಜ್ಯವಲದ ಕೆ.ಎನ್. ಶಮಂತ ಹಾಗೂ ತೋಟಗಾರಿಕೆ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು, ಕ್ಷೇತ್ರ ಮತ್ತು ನರ್ಸರಿ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ತೋಟಗಾರಿಕೆ ಕ್ಷೇತ್ರಗಳಲ್ಲಿ ಮೂಲ ಸೌಕರ್ಯಗಳನ್ನು ನಿರ್ಮಿಸಲು ನಬಾರ್ಡ್ ಅಥವಾ ಸಂಬಂಧಪಟ್ಟ ಇಲಾಖೆಗಳಿಗೆ ಆದಷ್ಟು ಬೇಗ ಪ್ರಸ್ತಾವ ಸಲ್ಲಿಸಬೇಕು. ನರ್ಸರಿಗಳ ಆದಾಯ ಹೆಚ್ಚಿಸಬೇಕು.– ರಾಹುಲ್ ಶಿಂಧೆ, ಸಿಇಒ ಬೆಳಗಾವಿ ಜಿಲ್ಲಾ ಪಂಚಾಯಿತಿ
ಈಗಲೂ ಕೆಲವೊಂದು ಕ್ಷೇತ್ರಗಳು ಇತರ ಇಲಾಖೆಗಳ ಹೆಸರಿನಲ್ಲಿವೆ. ಅವುಗಳನ್ನು ತೋಟಗಾರಿಕೆ ಇಲಾಖೆಯ ಹೆಸರಿಗೆ ಬದಲಿಸಬೇಕಿದೆ. ಇದಕ್ಕೆ ಸಂಬಂಧಿಸಿದ ವರದಿ ಸಿದ್ಧಪಡಿಸಲಾಗುವುದು.– ಮಾಹಾಂತೇಶ ಮುರಗೋಡ, ಉಪನಿರ್ದೇಶಕ ತೋಟಗಾರಿಕೆ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.