ADVERTISEMENT

ಹಸುಳೆ, ಬಾಣಂತಿ, ವೃದ್ಧೆ ಹೊರಹಾಕಿದ ಫೈನಾನ್ಸ್‌ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 17:36 IST
Last Updated 23 ಜನವರಿ 2025, 17:36 IST
ಬೆಳಗಾವಿ ತಾಲ್ಲೂಕಿನ ತಾರಿಹಾಳ ಗ್ರಾಮದಲ್ಲಿ ಗುರುವಾರ ಸಾಲ ವಸೂಲಿಗೆ ಬಂದ ಖಾಸಗಿ ಫೈನಾನ್ಸ್‌ ಸಿಬ್ಬಂದಿ,  ಹಸುಗೂಸು, ಬಾಣಂತಿ ಸಮೇತ ಎಲ್ಲರನ್ನೂ ಹೊರಹಾಕಿದರು
ಬೆಳಗಾವಿ ತಾಲ್ಲೂಕಿನ ತಾರಿಹಾಳ ಗ್ರಾಮದಲ್ಲಿ ಗುರುವಾರ ಸಾಲ ವಸೂಲಿಗೆ ಬಂದ ಖಾಸಗಿ ಫೈನಾನ್ಸ್‌ ಸಿಬ್ಬಂದಿ,  ಹಸುಗೂಸು, ಬಾಣಂತಿ ಸಮೇತ ಎಲ್ಲರನ್ನೂ ಹೊರಹಾಕಿದರು   

ಬೆಳಗಾವಿ: ತಾಲ್ಲೂಕಿನ ತಾರಿಹಾಳ ಗ್ರಾಮದಲ್ಲಿ ಗುರುವಾರ ಸಾಲ ವಸೂಲಿಗೆ ಬಂದ ಖಾಸಗಿ ಫೈನಾನ್ಸ್‌ ಸಿಬ್ಬಂದಿ, ಒಂದು ತಿಂಗಳ ಬಾಣಂತಿ ಹಾಗೂ ಹಸುಗೂಸು ಸೇರಿ ಮನೆಯ ಎಲ್ಲರನ್ನೂ ಹೊರಗೆ ಹಾಕಿದ್ದಾರೆ. ಪಾತ್ರೆ, ಬಟ್ಟೆಗಳನ್ನೆಲ್ಲ ಹೊರಗೆ ಎಸೆದು ಬೀಗ ಜಡಿದಿದ್ದಾರೆ. ಮನೆ ಗೋಡೆ ಮುಂದೆ ಇದು ಹರಾಜಿಗಿದೆ ಎಂದು ಬರೆದಿದ್ದಾರೆ.

ತಾರಿಹಾಳ ಗ್ರಾಮದ ಗಣಪತಿ ರಾಮಚಂದ್ರ ಲೋಹಾರ್ ಅವರ ಮನೆ ಜಪ್ತಿ ಮಾಡಲಾಗಿದೆ. ಗಣಪತಿ ಅವರು ಐದು ವರ್ಷಗಳ ಹಿಂದೆ ಮನೆ ಕಟ್ಟಿಸಲು ಖಾಸಗಿ ಫೈನಾನ್ಸ್‌ನಿಂದ ₹5 ಲಕ್ಷ ಸಾಲ ಪಡೆದಿದ್ದರು. ನಿರಂತರ ಮೂರು ವರ್ಷ ಕಂತುಗಳನ್ನು ಸರಿಯಾಗಿಯೇ ತುಂಬಿದ್ದಾರೆ. ವೃದ್ಧ ತಾಯಿಗೆ ಅನಾರೋಗ್ಯ, ಮಗಳ ಹೆರಿಗೆ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಕಂತು ಪಾವತಿಸಲು ಸಾಧ್ಯವಾಗಿಲ್ಲ.

ಇದರಿಂದ ಫೈನಾನ್ಸ್‌ನವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶದಂತೆ ಪೊಲೀಸರು ಹಾಗೂ ವಕೀಲರ ಸಮ್ಮುಖದಲ್ಲೇ ಮನೆ ಖಾಲಿ ಮಾಡಿಸಿದರು. ಮನೆಯಲ್ಲಿ ಹಸಿ ಬಾಣಂತಿ, ಹಸುಳೆ, ಅನಾರೋಗ್ಯಕ್ಕೆ ಒಳಗಾದ ವೃದ್ಧೆ ಇದ್ದರು. ಕನಿಷ್ಠ ಸೌಜನ್ಯ ತೋರದ ಸಿಬ್ಬಂದಿ ಎಲ್ಲ ವಸ್ತುಗಳನ್ನು ಹೊರಗೆ ಹಾಕಿ, ಕುಟುಂಬವನ್ನು ಬೀದಿಪಾಲು ಮಾಡಿದರು.

ADVERTISEMENT

ಇಡೀ ದಿನ ಕುಟುಂಬದವರು ಉಪವಾಸ ಕಳೆಯಬೇಕಾಯಿತು. ಮನೆ ಪಕ್ಕದಲ್ಲೇ ಶೆಡ್‌ ಹಾಕಿ ಅದರಲ್ಲೇ ಬಿಸಿಲಿನಿಂದ ಆಶ್ರಯ ಪಡೆಯಬೇಕಾಯಿತು. ಬಾಣಂತಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಆಗಿದ್ದರಿಂದ ಅವರು ತೀವ್ರ ಆತಂಕಗೊಂಡಿದ್ದಾರೆ.

ತಾರಿಹಾಳ ಗ್ರಾಮವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿದೆ.

ಬೆಳಗಾವಿ ತಾಲ್ಲೂಕಿನ ತಾರಿಹಾಳ ಗ್ರಾಮದಲ್ಲಿ ಗುರುವಾರ ಸಾಲ ವಸೂಲಿಗೆ ಬಂದ ಖಾಸಗಿ ಫೈನಾನ್ಸ್‌ ಸಿಬ್ಬಂದಿ  ಹಸುಗೂಸು ಬಾಣಂತಿ ಸಮೇತ ಎಲ್ಲರನ್ನೂ ಹೊರಹಾಕಿ ಮನೆ ಹರಾಜಿಗೆ ಇಟ್ಟರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.