ADVERTISEMENT

ಹಿಂಗಾರು ಬೆಳೆ ಹಾನಿ; ಇಂದಿನಿಂದ ಜಂಟಿ ಸಮೀಕ್ಷೆ

ಶ್ರೀಕಾಂತ ಕಲ್ಲಮ್ಮನವರ
Published 4 ಜನವರಿ 2019, 19:45 IST
Last Updated 4 ಜನವರಿ 2019, 19:45 IST
ಎಸ್.ಬಿ. ಬೊಮ್ಮನಹಳ್ಳಿ
ಎಸ್.ಬಿ. ಬೊಮ್ಮನಹಳ್ಳಿ   

ಬೆಳಗಾವಿ: ಹಿಂಗಾರು ಮಳೆ ವಿಫಲವಾಗಿದ್ದರಿಂದ ಜಿಲ್ಲೆಯ 10 ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಹಿಂಗಾರು ಬೆಳೆ ಹಾನಿಯಾಗಿರುವ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದು, ಇದಕ್ಕೆ ಪೂರಕವಾಗಿ ಅಧಿಕಾರಿಗಳು ಶನಿವಾರದಿಂದ ಸಮೀಕ್ಷೆ ನಡೆಸಲಿದ್ದಾರೆ.

ವಾಡಿಕೆ ಮಳೆಗಿಂತ ಶೇ 60ಕ್ಕಿಂತ ಕಡಿಮೆ ಅಥವಾ ಸತತ ಮೂರು ವಾರಗಳ ವರೆಗೆ ಒಂದು ಹನಿಯೂ ಮಳೆ ಸುರಿದಿರಲಿಲ್ಲವೆಂದರೆ ಅಂತಹ ಪ್ರದೇಶವನ್ನು ಬರ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿದೆ. ಈ ಮಾನದಂಡದ ಪ್ರಕಾರ, ಜಿಲ್ಲೆಯ ಅಥಣಿ, ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿ, ಗೋಕಾಕ, ಹುಕ್ಕೇರಿ, ಖಾನಾಪುರ, ರಾಮದುರ್ಗ, ರಾಯಬಾಗ ಹಾಗೂ ಸವದತ್ತಿ ತಾಲ್ಲೂಕುಗಳು ಘೋಷಣೆಯಾಗಿವೆ.

ಮಳೆ ಹಾಗೂ ಭೂಮಿಯ ತೇವಾಂಶದ ಕೊರತೆಯಿಂದಾಗಿ ಹಿಂಗಾರು ಬೆಳೆಗಳಾದ ಹಿಂಗಾರು ಜೋಳ, ಕಡಲೆ, ಗೋಧಿ, ಮೆಕ್ಕೆಜೋಳ, ಸೂರ್ಯಕಾಂತಿ, ಕುಸುಬಿ, ಅವರೆ, ಅಲಸಂದಿ, ಹುರುಳಿ, ಗುರಳ್ಳಿ ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿವೆ. ಇವುಗಳನ್ನು ಬೆಳೆದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.

ADVERTISEMENT

ಈ ಪ್ರದೇಶಗಳಲ್ಲಿ ಯಾವ ಯಾವ ಬೆಳೆಗಳು ಹಾನಿಗೊಳಗಾಗಿವೆ ಎನ್ನುವುದನ್ನು ಸ್ಥಳ ಸಮೀಕ್ಷೆ ನಡೆಸಿ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ಬಾಧಿತ ಪ್ರದೇಶ ಹಾಗೂ ಅಲ್ಲಿ ಹಾನಿಗೊಳಗಾದ ಬೆಳೆಗಳ ಚಿತ್ರಣವು ಕಾಣುವಂತಹ ಫೋಟೊಗಳನ್ನು ಮೊಬೈಲ್‌ನಲ್ಲಿ ತೆಗೆದು, ಅವುಗಳನ್ನು ಆ್ಯಪ್‌ ಮೂಲಕ ಅಪ್‌ಲೋಡ್‌ ಮಾಡಲಿದ್ದಾರೆ. ಈ ಫೋಟೊಗಳ ಆಧಾರದ ಮೇಲೆ ತೀವ್ರ ಹಾಗೂ ಸಾಧಾರಣ ಬರ ಪ್ರದೇಶಗಳೆಂದು ಸರ್ಕಾರ ಪುನರ್‌ ವರ್ಗೀಕರಣ ಮಾಡುವ ಸಾಧ್ಯತೆ ಇದೆ. ಇದನ್ನು ಆಧಾರವಾಗಿಟ್ಟುಕೊಂಡು, ಬೆಳೆ ಪರಿಹಾರ ಘೋಷಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಂಡದಲ್ಲಿ ಯಾರ‍್ಯಾರು?:ತಾಲ್ಲೂಕು ಮಟ್ಟದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಲಾಗುತ್ತದೆ. ತಹಶೀಲ್ದಾರ್‌ ಅವರು ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಅಧಿಕಾರಿಗಳನ್ನು ಸೇರಿಸಿಕೊಂಡು ತಂಡಗಳನ್ನು ರಚಿಸುತ್ತಾರೆ. ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಪೀಡಿತ ಪ್ರದೇಶಗಳನ್ನು ಪತ್ತೆ ಮಾಡುವುದು ಹಾಗೂ ಆ ಪ್ರದೇಶದ ಎಲ್ಲ ವಿವರಗಳನ್ನು ಒದಗಿಸಲಿದ್ದಾರೆ.

ಹಿಂಗಾರು ಪ್ರದೇಶ:ಹಿಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 3.32 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ, ಮಳೆಯ ಕೊರತೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಕೇವಲ 2,91,600 ಹೆಕ್ಟೇರ್‌ ಪ್ರದೇಶದಲ್ಲಿ (ಶೇ 88) ಬಿತ್ತನೆಯಾಗಿದೆ. ಇದರಲ್ಲಿ ಬಹುತೇಕ ಬೆಳೆಯು ಹಾನಿಗೊಳಗಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ತಕ್ಷಣ ಬೆಳೆ ಸಮೀಕ್ಷೆ ನಡೆಸಬೇಕು. ಪರಿಹಾರ ವಿತರಿಸಬೇಕು ಎಂದು ಕೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.