ADVERTISEMENT

ಬೆಳಗಾವಿ: ‘ಸರ್ಕಾರದ ಮೇಲೆ ಅವಲಂಬನೆ ಬಿಡಿ’

ಪಂಡಿತ ದೀನದಯಾಳ ಉಪಾಧ್ಯಾಯ ಪುಣ್ಯಸ್ಮರಣೆ, ಸಂಶೋಧನಾ ಕೃತಿಗಳ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2023, 5:36 IST
Last Updated 12 ಫೆಬ್ರುವರಿ 2023, 5:36 IST
ಬೆಳಗಾವಿಯ ರಾಣಿ ಚನ್ನಮ್ಮ ವಿ.ವಿ.ಯ ಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದಿಂದ ಶನಿವಾರ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ತಳವಾರ ಸಾಬಣ್ಣ ಅವರು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಿದರು
ಬೆಳಗಾವಿಯ ರಾಣಿ ಚನ್ನಮ್ಮ ವಿ.ವಿ.ಯ ಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದಿಂದ ಶನಿವಾರ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ತಳವಾರ ಸಾಬಣ್ಣ ಅವರು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಿದರು   

ಬೆಳಗಾವಿ: ‘ಸರ್ಕಾರಿ ಯೋಜನೆಗಳ ಮೇಲೆಯೇ ಪ್ರತಿಯೊಬ್ಬರು ಅವಲಂಬಿತರಾದರೆ ದೇಶ ಪ್ರಗತಿ ಹೊಂದುವುದು ಕಷ್ಟ. ಹಾಗಾಗಿ ದೇಶ ಮತ್ತು ತನಗೆ ಏನು ನೀಡುತ್ತಿದೆ ಎಂಬ ಸ್ವಾರ್ಥ ಚಿಂತನೆಯನ್ನು ತೊರೆಯುವುದು ಮುಖ್ಯ. ದೇಶ ಮತ್ತು ಸಮಾಜದ ಪ್ರಗತಿಗೆ ಶ್ರಮಿಸುವ ಅವಶ್ಯಕತೆ ಇದೆ’ ಎಂದು ವಿಧಾನ ಪರಿಷತ್ ಸದಸ್ಯ ಪ್ರೊ.ತಳವಾರ ಸಾಬಣ್ಣ ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ನೇತೃತ್ವದಲ್ಲಿ ಶನಿವಾರ ಜರುಗಿದ ಪಂಡಿತ ದೀನದಯಾಳ ಉಪಾಧ್ಯಾಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲ ಹೊಂದಿದವರು, ದುರ್ಬಲ ಜನಾಂಗದ ಉನ್ನತಿಗೆ ತ್ಯಾಗ ಮಾಡುವ ಅವಶ್ಯಕತೆಯಿದೆ. ಮೇಲ್ವರ್ಗ– ಕೆಳವರ್ಗ ಎಂಬ ದೊಡ್ಡ ಕಂದಕ ಸಮಾಜದಲ್ಲಿ ಉಂಟಾಗಿದೆ. ಈ ಕಂದಕ ತೊಡೆದು ಹಾಕಲು ಪರಸ್ಪರ ಹೊಂದಾಣಿಕೆ ಅಗತ್ಯ. ಒಬ್ಬರಿಗೊಬ್ಬರು ಶ್ರಮಿಸುವುದು ಅಗತ್ಯ. ಪಂಡಿತ ದೀನದಯಾಳ ಅಶಯದಂತೆ ಸಮಾಜದ ಕೊನೆಯ ವ್ಯಕ್ತಿಗೂ ಸರ್ಕಾರದ ಎಲ್ಲ ಯೋಜನೆಗಳು ಲಭಿಸುವಂತಾಗಬೇಕು’ ಎಂದರು.

ADVERTISEMENT

‘ಅರ್ಥಶಾಸ್ತ್ರ, ರಾಜಕೀಯ ಮತ್ತು ಸಾಮಾಜ ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪಂಡಿತ ದೀನದಯಾಳ ಉಪಾದ್ಯಾಯ ಅವರ ಕೊಡುಗೆ ಅನನ್ಯ. ಗ್ರಾಮೀಣ, ದುರ್ಬಲ ಮತ್ತು ಶೋಷಿತರ ಉನ್ನತಿಯಿಂದ ಮಾತ್ರ ಭಾರತ ಬಲಿಷ್ಠವಾಗುವುದು ಎಂಬ ಸ್ಪಷ್ಟ ಕಲ್ಪನೆ ಅವರು ಹೊಂದಿದ್ದರು. ಅವರ ಚಿಂತನೆ ಮತ್ತು ಕಾರ್ಯಗಳನ್ನು ನಾವು ಮುಂದುವರೆಸಿಕೊಂಡು ಹೋಗಬೇಕಾಗಿದೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಆರ್‌ಸಿಯು ಕುಲಪತಿ ಪ್ರೊ.ರಾಮಚಂದ್ರಗೌಡ ಮಾತನಾಡಿ, ‘ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠವು ಎರಡು ವರ್ಷದಲ್ಲಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿದೆ. ಕೋವಿಡ್ ಲಾಕ್‍ಡೌನ್‌ ಸಮಯದಲ್ಲಿ ಎರಡು ಗ್ರಾಮಗಳನ್ನು ದತ್ತು ಪಡೆದು, ಆಹಾರ ಕಿಟ್ ವಿತರಣೆ ಮಾಡಲಾಯಿತು. ಸಂಜೆ ಶಾಲಾ ಮಕ್ಕಳಿಗೆ ಮನೆಪಾಠದ ವ್ಯವಸ್ಥೆ ಕಲ್ಪಿಸಲಾಯಿತು’ ಎಂದರು.

ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಸಂಶೋಧನಾ ಲೇಖನಗಳನ್ನು ಒಳಗೊಂಡ ‘ಪಂಡಿತ ದೀನದಯಾಳ ಉಪಾಧ್ಯಾಯ ಅವರ ಚಿಂತನೆಗಳು’ ಮತ್ತು ‘ಪಂಡಿತ ದೀನದಯಾಳ ಉಪಾಧ್ಯಾಯ ರಿಫ್ಲೆಕ್ಷನ್ಸ್ ಆಫ್ ನೇಷನ್ ಬಿಲ್ಡಿಂಗ್’ ಎಂಬ ಎರಡು ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

ಮೌಲ್ಯಮಾಪನ ಕುಲಸಚಿವ ಪ್ರೊ.ಶಿವಾನಂದ ಗೋರನಾಳೆ, ಹಣಕಾಸು ಅಧಿಕಾರಿ ಪ್ರೊ.ಎಸ್.ಬಿ. ಆಕಾಶ, ಪ್ರೊ.ಎಚ್.ಬಿ. ಕಾಂಬ್ಳೆ, ಪ್ರೊ.ರಿಯಾಜ್ ಮನಗೂಳಿ, ಪ್ರೊ.ವಿಜಯ ನಾಗಣ್ಣವರ ಸೇರಿದಂತೆ ವಿವಿಧ ವಿಭಾಗಗಳ ಡೀನ್‌ಗಳು ಮತ್ತು ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಶೀತಲ ಅಕ್ಕೋಲೆ ಪ್ರಾರ್ಥಿಸಿದರು. ಪೀಠದ ಸಂಯೋಜಕ ಕನಕಪ್ಪ ಪೂಜಾರ ಪ್ರಾಸ್ತಾವಿಕ ಮಾತನಾಡಿದರು. ಸುಷ್ಮಾ ಆರ್. ವಂದಿಸಿದರು. ಪೀಠದ ಸಹಾಯಕ ಪ್ರಾಧ್ಯಾಪಕ ಶಿವಲಿಂಗಯ್ಯ ಗೋಠೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.