ADVERTISEMENT

ಬೆಳಗಾವಿ: ಹಳ್ಳಿಯಲ್ಲಿ ಡಿಜಿಟಲ್‌ ಗ್ರಂಥಾಲಯ, ಮುಗಳಿಹಾಳ ಗ್ರಾಮ ಪಂಚಾಯ್ತಿ ಪ್ರಯೋಗ

ಮುಗಳಿಹಾಳ ಗ್ರಾಮದಲ್ಲಿ ನಿರ್ಮಾಣ; ಜನರಿಗೆ ಅನುಕೂಲ

ಎಂ.ಮಹೇಶ
Published 8 ಫೆಬ್ರುವರಿ 2022, 19:30 IST
Last Updated 8 ಫೆಬ್ರುವರಿ 2022, 19:30 IST
ಬೆಳಗಾವಿ ಜಿಲ್ಲೆಯ ಮುಗಳಿಹಾಳದಲ್ಲಿ ಗ್ರಾಮ ಪಂಚಾಯ್ತಿಯಿಂದ ನಿರ್ಮಿಸಿರುವ ಡಿಜಿಟಲ್‌ ಗ್ರಂಥಾಲಯ
ಬೆಳಗಾವಿ ಜಿಲ್ಲೆಯ ಮುಗಳಿಹಾಳದಲ್ಲಿ ಗ್ರಾಮ ಪಂಚಾಯ್ತಿಯಿಂದ ನಿರ್ಮಿಸಿರುವ ಡಿಜಿಟಲ್‌ ಗ್ರಂಥಾಲಯ   

ಬೆಳಗಾವಿ: ಜಿಲ್ಲೆಯಲ್ಲಿ ಹಿಂದುಳಿದಿರುವ ಪ್ರದೇಶಗಳಲ್ಲೊಂದಾದ ಯರಗಟ್ಟಿ ತಾಲ್ಲೂಕಿನ ಮುಗಳಿಹಾಳ ಗ್ರಾಮ ಪಂಚಾಯ್ತಿಯಿಂದ ಈಚೆಗೆ ನಿರ್ಮಿಸಿರುವ ಡಿಜಿಟಲ್‌ ಗ್ರಂಥಾಲಯ ಗಮನಸೆಳೆಯುತ್ತಿದೆ. ಅಲ್ಲಿನ ಜ್ಞಾನದ ಹಸಿವನ್ನು ನೀಗಿಸುತ್ತಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್‌ರಾಜ್‌ ಇಲಾಖೆಯ ಸಹಯೋಗದಲ್ಲಿ ಮುಗಳಿಹಾಳ ಗ್ರಾಮ ಪಂಚಾಯ್ತಿಯಿಂದ ಈ ಗ್ರಂಥಾಲಯ ನಿರ್ಮಿಸಲಾಗಿದೆ. ಇದು ಮಾಹಿತಿಕೇಂದ್ರವನ್ನೂ ಒಳಗೊಂಡಿದೆ. ಪಂಚಾಯ್ತಿ ಕೇಂದ್ರ ಸ್ಥಾನವಾದ ಮುಗಳಿಹಾಳ ಜತೆಗೆ ನೆರೆಯ ದಾಸನಾಳ ಹಾಗೂ ಮೆಳ್ಳಿಕೇರಿ ಈ ಮೂರು ಗ್ರಾಮಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಬಳಕೆಗೆ ಗ್ರಂಥಾಲಯ ಮುಕ್ತಗೊಂಡಿದೆ. ಜ್ಞಾನದಾಸೋಹ ಮಾಡುತ್ತಿದೆ.

ಕಟ್ಡಡದ ಸುತ್ತಲಿನ ಗೋಡೆಗಳ ಮೇಲೂ ಚಿತ್ರಗಳನ್ನು ಬಿಡಿಸಿ ಅಂದಗೊಳಿಸಲಾಗಿದೆ. ಜ್ಞಾನಪೀಠ ಪುರಸ್ಕೃತ ದಿಗ್ಗಜರ ಚಿತ್ರಗಳನ್ನು ಬಿಡಿಸಲಾಗಿದೆ. ವನ್ಯಸಂಪತ್ತನ್ನೂ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಇದು ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.

ADVERTISEMENT

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸರ್ಕಾರಿ ಪ್ರೌಢಶಾಲೆಗೆ ಆಟದ ಮೈದಾನ ನಿರ್ಮಿಸಿ ಗಮನಸೆಳೆದಿದ್ದ ಈ ಗ್ರಾಮ ಪಂಚಾಯ್ತಿಯಿಂದ ಇತ್ತೀಚೆಗೆ ಪುಸ್ತಕ ಪ್ರ‍ಪಂಚವನ್ನೂ ಕಟ್ಟಲಾಗಿದೆ.

₹ 7 ಲಕ್ಷ ವೆಚ್ಚ:3,500 ಪುಸ್ತಕಗಳ ಸಂಗ್ರಹ ಇಲ್ಲಿದೆ. ಅಲ್ಲದೇ, ಡಿಜಿಟಲ್‌ ವೇದಿಕೆಯಲ್ಲಿ ಮತ್ತಷ್ಟು ಪುಸ್ತಕಗಳನ್ನು ಪಡೆದುಕೊಳ್ಳಲು ಅವಕಾಶವಿದೆ. ಈಗಾಗಲೇ 350 ಮಂದಿ ಸದಸ್ಯರಾಗಿದ್ದಾರೆ.

‘14ನೇ ಹಣಕಾಸು ಯೋಜನೆಯ ಉಳಿಕೆ ಅನುದಾನ ಮತ್ತು ಬಡ್ಡಿ ಮೊತ್ತದಲ್ಲಿ ವೆಚ್ಚ ಭರಿಸಲಾಗಿದೆ. ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಗ್ರಂಥಾಲಯ ಕಟ್ಟಡವನ್ನು ಕೆಡವಿ ಹೊಸದಾಗಿ ಕಟ್ಟಡವನ್ನು ₹ 5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಾಮಗ್ರಿಗಳಿಗಾಗಿ ₹ 2 ಲಕ್ಷ ವೆಚ್ಚವಾಗಿದೆ. 4 ಕಂಪ್ಯೂಟರ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರಕೃತಿ ಸಿರಿ ಬಿಂಬಿಸುವ ಚಿತ್ರಗಳನ್ನು ಬಿಡಿಸಿ ಆಕರ್ಷಕಗೊಳಿಸಲಾಗಿದೆ. ಶೀಘ್ರದಲ್ಲೇ ಸೋಪಾ ವ್ಯವಸ್ಥೆಗಳನ್ನು ಮಾಡಲಾಗುವುದು ’ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅಮಿತ್ ಯಲ್ಲಪ್ಪ ನಾಯಿಕ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಪನ್ಮೂಲ ಬಳಸಿಕೊಳ್ಳುತ್ತಿದ್ದಾರೆ:‘ಪುಸ್ತಕಗಳೊಂದಿಗೆ ದಿನಪತ್ರಿಕೆಗಳು, ಮಾಸಿಕಗಳನ್ನು ತರಿಸಲಾಗುತ್ತಿದೆ. ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗುತ್ತಿರುವವರು ಇಲ್ಲಿನ ಸಂಪನ್ಮೂಲವನ್ನು ಬಳಸಿಕೊಳ್ಳುತ್ತಿದ್ದಾರೆ. ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ತೆರೆದಿರುತ್ತದೆ. ಏಕಕಾಲದಲ್ಲಿ 30 ಮಂದಿ ಕುಳಿತು ಅಭ್ಯಾಸ ಮಾಡುವುದಕ್ಕೆ ಬೇಕಾದ ಆಸನಗಳು, ಟೇಬಲ್‌ಗಳನ್ನು ಒದಗಿಸಲಾಗಿದೆ. ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಯೋಜನೆಯೂ ಇದೆ. ವೈ–ಫೈ ವ್ಯವಸ್ಥೆಯೂ ಬರಲಿದೆ’ ಎಂದು ಮಾಹಿತಿ ನೀಡಿದರು.

‘ಈ ಕಾರ್ಯಕ್ಕೆ ಪಂಚಾಯ್ತಿ ಸದಸ್ಯರು ಹಾಗೂ ಗ್ರಾಮಸ್ಥರು ಸಹಕಾರ ನೀಡಿದ್ದಾರೆ’ ಎನ್ನುತ್ತಾರೆ ಅವರು.

ಒಳಾವರಣದಲ್ಲಿ ‘ಜಗತ್ತನ್ನು ಬೆಳಗಲು ಸೂರ್ಯ ಬೇಕು ಬದುಕನ್ನು ಬೆಳಗಲು ಪುಸ್ತಕ ಬೇಕು’, ‘ಪುಸ್ತಕದ ಅವಹೇಳನ ಜ್ಞಾನದ ಕಗ್ಗೊಲೆ’, ‘ಮೇಮೇಲೆ ಹರಿದ ಬಟ್ಟೆ ಇದ್ದರೂ ಚಿಂತೆ ಇಲ್ಲ ಕೈಯಲ್ಲೊಂದು ಪುಸ್ತಕವಿರಲಿ’, ‘ಅತ್ತುತ್ತಮ ಪುಸ್ತಕಗಳು ಉತ್ತಮ ಸಂಗಾತಿಗಳು’, ‘ಪ್ರಪಂಚದಲ್ಲಿ ಮರಣವಿಲ್ಲದ ವರ ಪಡೆದಿರುವ ವಸ್ತು ಪುಸ್ತಕ’, ‘ಶಿಕ್ಷಣವೇ ಶಕ್ತಿ’ ಎಂಬಿತ್ಯಾದಿ ಗೋಡೆ ಬರಹಗಳನ್ನು ಬರೆಯಲಾಗಿದೆ. ಇದರೊಂದಿಗೆ ಪುಸ್ತಕಗಳು ಹಾಗೂ ಜ್ಞಾನದ ಮಹತ್ವವನ್ನು ತಿಳಿಸುವ ಕೆಲಸವನ್ನು ಮಾಡಲಾಗಿದೆ.

ಮುಗಳಿಹಾಳ ಗ್ರಾಮದಲ್ಲಿ ಪಂಚಾಯ್ತಿಯಿಂದ ಅತ್ಯಂತ ಕಡಿಮೆ ವೆಚ್ಚದಲ್ಲಿ ಸುಸಜ್ಜಿತ ಗ್ರಂಥಾಲಯವನ್ನು ನಿರ್ಮಿಸಿರುವುದು ಮಾದರಿಯಾಗಿದೆ.

– ಯಶವಂತಯಕುಮಾರ, ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ.

ನಮ್ಮೂರಿನಲ್ಲಿ ಪುಸ್ತಕ ಪ್ರಪಂಚವನ್ನು ಆಕರ್ಷಕವಾಗಿ ಸಜ್ಜುಗೊಳಿಸಲಾಗಿದೆ. ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಿರುವವರಿಗೆ ಅನುಕೂಲವಾಗಿದೆ.

–ವಿಠ್ಠಳ ದಳವಾಯಿ, ಶಿಕ್ಷಕ, ಮುಗಳಿಹಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.