ADVERTISEMENT

ಒಣಗಿದ ಕಬ್ಬು: ರೈತರಿಗೆ ₹ 470 ಕೋಟಿ ನಷ್ಟ

ಸಂಗಮೇಶ ನಿರಾಣಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 17:27 IST
Last Updated 26 ಜೂನ್ 2019, 17:27 IST
ಸಂಗಮೇಶ ನಿರಾಣಿ
ಸಂಗಮೇಶ ನಿರಾಣಿ   

ಅಥಣಿ: ‘ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸದ ಮಹಾರಾಷ್ಟ್ರ ಸರ್ಕಾರದ ಮೊಂಡುತನದಿಂದಾಗಿ ನಮ್ಮಲ್ಲಿನ ನದಿ ತೀರದ ರೈತರ ಬದುಕಿನ ಮೇಲೆ 3 ವರ್ಷಗಳ ಕಾಲ ಮೇಲೇಳದ ರೀತಿಯಲ್ಲಿ ಭಾರಿ ಹೊಡೆತ ಬಿದ್ದಿದೆ’ ಎಂದು ನಿರಾಣಿ ಉದ್ಯಮ ಸಮೂಹದ ಹಿಪ್ಪರಗಿ– ಮೈಗೂರ ಸಾಯಿ ಪ್ರಿಯಾ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಸಂಗಮೇಶ ನಿರಾಣಿ ಆರೋಪಿಸಿದರು.

ಸತ್ತಿ ಗ್ರಾಮದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಮ್ಮ ಕಾರ್ಖಾನೆಗೆ ಅಥಣಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಕಬ್ಬು ಬರುತ್ತಿತ್ತು. ಆದರೆ, ಈ ಬಾರಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತ ಸ್ಥಿತಿ ರೈತರದಾಗಿದೆ. ಬೆಳೆ ಸರಿಯಾಗಿ ಬಂದಿಲ್ಲ. ಹೀಗಾಗಿ, ಯಾವುದೇ ಕಾರ್ಖಾನೆಗಳಿಗೂ ಹೆಚ್ಚಿನ ಪ್ರಮಾಣದ ಕಬ್ಬು ದೊರೆಯುವುದು ಕಷ್ಟ’ ಎಂದು ಹೇಳಿದರು.

‘ನಿರಾಣಿ ಉದ್ಯಮ ಸಮೂಹದಿಂದ ಕೃಷಿ ತಜ್ಞರ ನೆರವು ಪಡೆದು ಬೆಳೆ ಹಾನಿ ಬಗ್ಗೆ ಸಮಗ್ರವಾಗಿ ಅದ್ಯಯನ ನಡಸಿ, ವರದಿ ಸಿದ್ಧಪಡಿಸಲಾಗಿದೆ. ಕೃಷ್ಣಾ ನದಿ ತೀರದ ಅಥಣಿ, ಜಮಖಂಡಿ, ರಾಯಬಾಗ ಮತ್ತು ಚಿಕ್ಕೋಡಿ ತಾಲ್ಲೂಕುಗಳ ಒಟ್ಟು 103 ಹಳ್ಳಿಗಳಲ್ಲಿ ಅಧ್ಯಯನ ನಡೆಸಲಾಗಿದೆ. ಈ ಭಾಗದ ಶೇ 22ರಷ್ಟು ಅಂದರೆ, 32ಸಾವಿರ ಎಕರೆ ಕಬ್ಬು ಒಣಗಿದೆ. ಅಂದಾಜು 16 ಲಕ್ಷ ಟನ್ ಕಬ್ಬು ಹಾಳಾಗಿದೆ. ₹ 470 ಕೋಟಿ ನಷ್ಟವಾಗಿದೆ. ಈ ಹಾನಿ ತುಂಬಿಕೊಡುವವರು ಯಾರು’ ಎಂದು ಪ್ರಶ್ನಿಸಿದರು.

ADVERTISEMENT

‘ಕೃಷ್ಣಾ ನದಿ ಬತ್ತಿದ್ದರಿಂದ, ಹೈನುಗಾರಿಕೆ ಸೇರಿದಂತೆ ಕೃಷಿ ಆಧಾರಿತವಾದ ಇತರ ಆದಾಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ರಾಷ್ಟ್ರೀಯ ಆದಾಯಕ್ಕೂ ದೊಡ್ಡ ಪೆಟ್ಟು ಬಿದ್ದಿದೆ. ಸರ್ಕಾರವು ಈ ಸಮಸ್ಯೆ ಪರಿಹಾರಕ್ಕೆ ಮುಂದಿನ ದಿನಗಳಲ್ಲಿ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‌‘ಬಿಜೆಪಿ ಮುಖಂಡರ ನಿಯೋಗ, ಸರ್ಕಾರದ ಮನವಿಗೂ ಮಹಾರಾಷ್ಟ್ರ ಸರ್ಕಾರ ಕಿವಿಗೊಡಲಿಲ್ಲ. ಆ ರಾಜ್ಯದ ಮುಖ್ಯಮಂತ್ರಿ ಸ್ಪಂದಿಸಲಿಲ್ಲ. ಪರಿಶೀಲಿಸುವೆ, ಅಧಿಕಾರಿಗಳಿಗೆ ಸೂಚಿಸುವೆ ಎಂದು ಹೇಳಿ ಸಮಯ ದೂಡಿದರು. ಇದರಿಂದ ಕರ್ನಾಟಕಕ್ಕೆ ಅಪಾರವಾದ ಹಾನಿಯಾಯಿತು’ ಎಂದು ದೂರಿದರು.

ಮುಖಂಡರಾದ ಮಲ್ಲಪ್ಪ ಹಂಚಿನಾಳ, ನಿಂಗಪ್ಪ ಚೌಗಲಾ, ಬಿ.ಟಿ. ಪಾಟೀಲ, ರಾಮಣ್ಣ ಬಿರಡಿ, ಸಂದೀಪ ದಾನಸೂರ, ಮಹಾದೇವ ಜಕ್ಕಪ್ಪನವರ, ರಾಮು ಬಾಪುಸರ, ಶಂಕರ ದತ್ತಕನವರ, ಪ್ರಭು ಬಿರಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.