ADVERTISEMENT

ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ

ವಿಟಿಯುನಿಂದ ವರ್ಚುವಲ್ ಲ್ಯಾಬ್ ತರಬೇತಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 14:58 IST
Last Updated 20 ಅಕ್ಟೋಬರ್ 2020, 14:58 IST
ಬೆಳಗಾವಿಯ ವಿಟಿಯು ಹಮ್ಮಿಕೊಂಡಿರುವ ಆನ್‌ಲೈನ್ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಕರಿಸಿದ್ದಪ್ಪ ಮಾತನಾಡಿದರು
ಬೆಳಗಾವಿಯ ವಿಟಿಯು ಹಮ್ಮಿಕೊಂಡಿರುವ ಆನ್‌ಲೈನ್ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಕರಿಸಿದ್ದಪ್ಪ ಮಾತನಾಡಿದರು   

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತನ್ನ ಅಧೀನದಲ್ಲಿರುವ ಎಂಜಿನಿಯರಿಂಗ್ ಕಾಲೇಜುಗಳ ಬೋಧಕ ಸಿಬ್ಬಂದಿಗೆ ವರ್ಚುವಲ್ ಲ್ಯಾಬ್ ಕುರಿತು ತರಬೇತಿ ನೀಡಲು ಹಮ್ಮಿಕೊಂಡಿರುವ 5 ದಿನಗಳ ಆನ್‌ಲೈನ್ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ (ಎಫ್‌ಡಿಪಿ)ಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್ಐಟಿಕೆ) ಸಹಯೋಗದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಕುಲಪತಿ ಪ್ರೊ.ಕರಿಸಿದ್ದಪ್ಪ ಉದ್ಘಾಟಿಸಿದರು.

‘ಸಾಂಪ್ರದಾಯಿಕ ಬೋಧನಾ ಕಲಿಕೆಯ ಪ್ರಕ್ರಿಯೆ ಪರಿಣಾಮಕಾರಿಗೊಳಿಸುವಲ್ಲಿ ಇವುಗಳು ಪ್ರಮುಖ ಪಾತ್ರ ವಹಿಸುತ್ತವೆ. ವರ್ಚುವಲ್ ಆದರೂ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಕಲಿಕೆಗೆ ಸಹಾಯ ಮಾಡುತ್ತದೆ. ವಿಶ್ವವಿದ್ಯಾಲಯದ ಪಠ್ಯಕ್ರಮದ ಪ್ರಕಾರ ಅಧ್ಯಾಪಕರು ವರ್ಚುವಲ್ ಲ್ಯಾಬ್‌ಗಳ ವಿಷಯ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಬಹುದು’ ಎಂದು ಹೇಳಿದರು.

ADVERTISEMENT

‘ಎಂಜಿಯರಿಂಗ್ ಹಾಗೂ ಅನ್ವಿಯಿಕ ವಿಜ್ಞಾನ ಕ್ಷೇತ್ರದ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿ ದಿನ ವಿಟಿಯು ಅಧೀನದ ಎಂಜಿನಿಯರಿಂಗ್ ಕಾಲೇಜುಗಳ 250 ಶಿಕ್ಷಕರಿಗೆ ತರಬೇತಿ ನೀಡಲಾಗುವುದು. 1,765 ಮಂದಿ ನೋಂದಾಯಿಸಿದ್ದಾರೆ’ ಎಂದರು.

‘ವರ್ಚುವಲ್ ಲ್ಯಾಬ್ಸ್‌ ಕೇಂದ್ರ ಶಿಕ್ಷಣ ಸಚಿವಾಲಯದ ಧನಸಹಾಯದ ಅಡಿಯಲ್ಲಿ ಐಸಿಟಿ ಮೂಲಕ ಶಿಕ್ಷಣದ ರಾಷ್ಟ್ರೀಯ ಮಿಷನ್ ಕಾರ್ಯಕ್ರಮವಾಗಿದೆ. ದೆಹಲಿಯ ಐಐಟಿ ಸಾರಥ್ಯದಲ್ಲಿ ರಾಷ್ಟ್ರದ ಪ್ರಮುಖ ಹನ್ನೊಂದು ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳು ವರ್ಚುವಲ್ ಲ್ಯಾಬ್‌ಗಳನ್ನು ಅಭಿವೃದ್ಧಿಪಡಿಸಿವೆ. ಇದರಲ್ಲಿ ಕರ್ನಾಟಕದ ಎನ್‌ಐಟಿಕೆಯು ಒಂದಾಗಿದೆ. ಎಂಜಿನಿಯರಿಂಗ್ ಮತ್ತು ವಿಜ್ಞಾನ ವಿಷಯಗಳಲ್ಲಿ ಪರಿಣಾಮಕಾರಿ ಕಲಿಕೆಗೆ ಸಹಾಯ ಮಾಡಲು ಉತ್ತಮ ವೇದಿಕೆಯಾಗಿದೆ. ಇದು ಉಚಿತವಾಗಿದ್ದು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸಾವಿರಕ್ಕೂ ಹೆಚ್ಚು ಪ್ರಯೋಗಗಳನ್ನು ಹೊಂದಿದೆ’ ಎಂದು ಎನ್ಐಟಿಕೆಯ ಸೆಂಟರ್ ಫಾರ್ ಸಿಸ್ಟಮ್ ಡಿಸೈನ್ ಮುಖ್ಯಸ್ಥ ಪ್ರೊ.ಕೆ.ವಿ. ಗಂಗಾಧರನ್ ಮಾಹಿತಿ ನೀಡಿದರು.

ಕುಲಸಚಿವರಾದ ಪ್ರೊ.ಎ.ಎಸ್. ದೇಶಪಾಂಡೆ, ಪ್ರೊ.ಸತೀಶ್ ಅಣ್ಣಿಗೇರಿ ಮಾತನಾಡಿದರು.

ಡಾ.ಪಿ. ಸಂಧ್ಯಾ ಮತ್ತು ಡಾ.ಪೂರ್ಣಿಮಾ ಪಾಟೀಲ ಸಂಯೋಜಿಸಿದ್ದರು. ವಿಟಿಯುನ ವರ್ಚುವಲ್ ಲ್ಯಾಬ್ ಸಂಯೋಜಕಿ ಡಾ.ರಶ್ಮಿ ರಚ್ ಸ್ವಾಗತಿಸಿದರು. ವಿಶೇಷ ಅಧಿಕಾರಿ ಪ್ರೊ.ಶ್ರವಣ ಬಿ.ಕೆ. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.