ADVERTISEMENT

ಬೆಳಗಾವಿಯಲ್ಲಿ 'ದುರ್ಗಾಮಾತಾ ದೌಡ್‌"ಗೆ ಅದ್ಧೂರಿ ಚಾಲನೆ

ಒಂಬತ್ತು ದಿನಗಳ ಕಾಲ ನಗರದ ವಿವಿಧೆಡೆ ಪಥ ಸಂಚಲನ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 12:45 IST
Last Updated 29 ಸೆಪ್ಟೆಂಬರ್ 2019, 12:45 IST
ಬೆಳಗಾವಿಯಲ್ಲಿ ಭಾನುವಾರ ನಡೆದ ದುರ್ಗಾಮಾತಾ ದೌಡ್‌ನಲ್ಲಿ ನೂರಕ್ಕೂ ಹೆಚ್ಚು ಯುವಕರು ಪಾಲ್ಗೊಂಡಿದ್ದರು 
ಬೆಳಗಾವಿಯಲ್ಲಿ ಭಾನುವಾರ ನಡೆದ ದುರ್ಗಾಮಾತಾ ದೌಡ್‌ನಲ್ಲಿ ನೂರಕ್ಕೂ ಹೆಚ್ಚು ಯುವಕರು ಪಾಲ್ಗೊಂಡಿದ್ದರು    

ಬೆಳಗಾವಿ: ಹಿಂದೂ ಧರ್ಮದ ಸಂಸ್ಕೃತಿ–ಸಂಪ್ರದಾಯ ಹಾಗೂ ಆಚರಣೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹಾಗೂ ನವರಾತ್ರಿ ಅಂಗವಾಗಿ ಆಚರಿಸುವ ದುರ್ಗಾ ಮಾತಾ ದೌಡ್‌ಗೆ ನಗರದಲ್ಲಿ ಭಾನುವಾರ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.

ಇಲ್ಲಿನ ಶಹಾಪುರದ ಶಿವಾಜಿ ಉದ್ಯಾನದಲ್ಲಿ ನಸುಕಿನ ಜಾವ 6ಕ್ಕೆವಾಸುದೇವ ಛತ್ರೆ ಗುರೂಜಿ ಅವರು ಶಿವಾಜಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದೌಡ್‌ಗೆ ಚಾಲನೆ ನೀಡಿದರು. ಸೂರ್ಯೋದಯಕ್ಕಿಂತ ಮುಂಚೆಯೇ ನೂರಾರು ಯುವಕರುಬಿಳಿ ಬಣ್ಣದ ಬಟ್ಟೆ ಹಾಗೂ ತಲೆಗೆ ಕೇಸರಿ ಪೇಟಧರಿಸಿ ಜಮಾಯಿಸಿದ್ದರು.

ಉದ್ಯಾನದಿಂದ ಕಪಿಲೇಶ್ವರ ಮಂದಿರದವರೆಗೆಪಥಸಂಚಲನ ಜರುಗಿತು. ಭಗವಾ ಧ್ವಜ ಹಿಡಿದ ವ್ಯಕ್ತಿಯ ಹಿಂಬದಿಯಿಂದ ನೂರಾರು ಯುವಕರು ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದು ಸಾಗಿದರು. ‘ಮಾತಾಮಾತಾ ದುರ್ಗಾಮಾತಾ’, ‘ಜೈ ಭವಾನಿ–ಜೈ ಶಿವಾಜಿ’ ಘೋಷಣೆಗಳು ದಾರಿಯುದ್ಧಕ್ಕೂ ಮೊಳಗಿದವು.

ADVERTISEMENT

ಮಹಿಳೆಯರಿಂದ ಸ್ವಾಗತ: ದೌಡ್ ಸಾಗುವ ಮಾರ್ಗದಲ್ಲಿ ಆಕರ್ಷಕ ರಂಗೋಲಿ ಬಿಡಿಸಲಾಗಿತ್ತು. ಮನೆಗಳನ್ನು ತಳಿರು–ತೋರಣಗಳಿಂದ ಸಿಂಗರಿಸಲಾಗಿತ್ತು. ವಿವಿಧ ಬಡಾವಣೆಗಳ ಮಹಿಳೆಯರು ಆರತಿ ಬೆಳಗಿ ದೌಡ್‌ಗೆ ಸ್ವಾಗತ ಕೋರಿದರು.

‌ದೌಡ್‌ನಲ್ಲಿ ಪಾಲ್ಗೊಂಡಿದ್ದ ಯುವಕರು ಮಾರ್ಗಮಧ್ಯದ ದೇವಸ್ಥಾನಗಳಿಗೆ ತೆರಳಿ ಆರತಿ ಬೆಳಗಿ, ಪೂಜೆ ಸಲ್ಲಿಸಿದರು.ಶಾಸ್ತ್ರಿ ನಗರ, ಮಹಾದ್ವಾರ ರಸ್ತೆ, ಗೂಡಶೆಡ್‌ ರಸ್ತೆ, ಕಪಿಲೇಶ್ವರ ಕಾಲೊನಿ ಮೂಲಕ ದೌಡ್‌ ಸಂಚರಿಸಿತು. ಕಪಿಲೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಧ್ವಜ ಇಳಿಸುವ ಮೂಲಕ ದೌಡ್‌ ಮುಕ್ತಾಯಗೊಂಡಿತು.

ಶಿವ ಪ್ರತಿಷ್ಠಾನ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಸದಸ್ಯರು ದೌಡ್‌ನಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಿದ್ದರು. ಮರಾಠಿ ಹಾಗೂ ಕನ್ನಡ ಭಾಷೆಯ ಜನರು ಒಟ್ಟಾಗಿ ಪಾಲ್ಗೊಂಡಿದ್ದರಿಂದ ಭಾಷಾ ಬಾಂಧವ್ಯಕ್ಕೂ ದೌಡ್‌ ಸಾಕ್ಷಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.