ಬೆಳಗಾವಿ: ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದೇಮಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ನಾಗರತ್ನಾ ಬಸಪ್ಪ ಕೊಳ್ಳಿ ಅವರು ಜಪಾನ್‌ನಲ್ಲಿ ಜೂನ್ 14 ರಿಂದ 21ರವರೆಗೆ ನಡೆಯುವ ಅಂತರರಾಷ್ಟ್ರೀಯ ವಿಜ್ಞಾನ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವರು.
ಕೂಲಿಗೆಲಸ ಮಾಡುವ ತಂದೆ ಬಸಪ್ಪ ಮತ್ತು ತಾಯಿ ರುದ್ರವ್ವ ಅವರ ಪುತ್ರಿ ನಾಗರತ್ನ ಕಂಡುಹಿಡಿದ ‘ಸುಲಭವಾಗಿ ತೆಂಗಿನಕಾಯಿ ಚಿಪ್ಪು ಸುಲಿಯುವ ಸಾಧನ’ವು ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ‘ಇನ್‌ಸ್ಪೈಯರ್’ ವಿಜ್ಞಾನ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಗಳಿಸಿದೆ.ವಿಜ್ಞಾನ ಶಿಕ್ಷಕಿ ರಕ್ಷಾ ಮಡಿವಾಳ ಮಾರ್ಗದರ್ಶನ ಮಾಡಿದ್ದಾರೆ.
‘ಮನೆಯಲ್ಲಿ ಕಡು ಬಡತನವಿದೆ. ಹಣಕಾಸಿನ ಸಮಸ್ಯೆಯಿದೆ. ದೇಮಟ್ಟಿ ಗ್ರಾಮ ಪಂಚಾಯಿತಿಯವರು ₹38 ಸಾವಿರ ಕೊಟ್ಟು, ನವದೆಹಲಿಗೆ ವಿಮಾನದ ಟಿಕೆಟ್ ಬುಕ್ ಮಾಡಿದ್ದಾರೆ. ಶಾಸಕ ಬಾಬಾಸಾಹೇಬ ಪಾಟೀಲ ₹20 ಸಾವಿರ ಖರ್ಚಿಗೆ ನೀಡಿದ್ದಾರೆ’ ಎಂದು ನಾಗರತ್ನ ‘ಪ್ರಜಾವಾಣಿ’ಗೆ ತಿಳಿಸಿದರು.
ರಾಜ್ಯದಿಂದ 12 ವಿದ್ಯಾರ್ಥಿಗಳು ಆಯ್ಕೆ: ‘ಈ ಸ್ಪರ್ಧೆಗೆ ರಾಜ್ಯದಿಂದ 12 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ನಾಗರತ್ನಾ, ಈಶ್ವರಿ ಮೋರೆ, ಶ್ರೀಸೌಮ್ಯ, ಎಸ್.ಕೆ.ಸುಕೃತಾ, ಅಮತ್ ಉಲ್ ಅಹಮದ್ ರುಶ್ದಾ, ನಿಶಾಲ್ ಬೆಥಿ, ರಕ್ಷಿತಾ ಅಂದಾನಶೆಟ್ಟಿ ಚುರ್ಚಿಹಾಳ, ಅಬ್ದುಲ್ ಬಾಷಿತ್, ಅಮೂಲ್ಯ ಹೆಗಡೆ, ನಿಖಿತಾ, ತುಪಲಿ ಸಿಸಿರಾ ರೆಡ್ಡಿ, ಆರ್.ಪ್ರಾರ್ಥನಾ ಆಯ್ಕೆಯಾಗಿದ್ದಾರೆ’ ಎಂದು ನೋಡಲ್ ಅಧಿಕಾರಿ ಮೀನಾಕ್ಷಿ ಪಾಟೀಲ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.