ADVERTISEMENT

ಐನಾಪುರದಲ್ಲಿ ಜೈನ ಸಮಾವೇಶ 8ರಂದು

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 9:27 IST
Last Updated 3 ಜೂನ್ 2025, 9:27 IST
   

ಬೆಳಗಾವಿ: ‘ಕಾಗವಾಡ ತಾಲ್ಲೂಕಿನ ಐನಾಪುರದಲ್ಲಿ ಗುಣಧರನಂದಿ ಮಹಾರಾಜರ ನೇತೃತ್ವ ಮತ್ತು ಎಲ್ಲ ಭಟ್ಟಾರಕ ಸ್ವಾಮಿಗಳ ಸಾನ್ನಿಧ್ಯದಲ್ಲಿ ಜೂನ್‌ 8ರಂದು ಬೃಹತ್ ಜೈನ ಸಮಾವೇಶ ಆಯೋಜಿಸಲಾಗಿದೆ. ಇದರಲ್ಲಿ 1 ಲಕ್ಷ ಜನರು ಸೇರುವ ನಿರೀಕ್ಷೆಯಿದೆ’ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೈನ ಸಮುದಾಯದ ಅಭಿವೃದ್ಧಿಗಾಗಿ ನಿಗಮ–ಮಂಡಳಿ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವ ಕುರಿತು ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಆದರೆ, ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಐನಾಪುರದ ಸಮಾವೇಶದಲ್ಲಿ ಈ ವಿಚಾರವಾಗಿ ಧ್ವನಿ ಎತ್ತುತ್ತೇವೆ. ನಮ್ಮ ಸಮುದಾಯದ ಹಕ್ಕೊತ್ತಾಯ ಮಂಡಿಸಿ, ವಿವಿಧ ನಿರ್ಣಯ ತೆಗೆದುಕೊಳ್ಳುತ್ತೇವೆ’ ಎಂದರು.

‘ಪಕ್ಷಾತೀತವಾಗಿ ನಡೆಯುತ್ತಿರುವ ಈ ಸಮಾವೇಶಕ್ಕೆ ಮುಖ್ಯ ಅತಿಥಿಗಳಾಗಿ ರಾಜ್ಯಪಾಲ ಥಾವರಚಂದ ಗೆಹ್ಲೋತ್‌, ಸಚಿವರಾದ ಸತೀಶ ಜಾರಕಿಹೊಳಿ, ಡಿ.ಸುಧಾಕರ, ಲಕ್ಷ್ಮೀ ಹೆಬ್ಬಾಳಕರ, ಸಂಸದರಾದ ಜಗದೀಶ ಶೆಟ್ಟರ್‌, ಪ್ರಿಯಾಂಕಾ ಜಾರಕಿಹೊಳಿ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2 ಪ್ರಕಾಶ ಹುಕ್ಕೇರಿ, ಶಾಸಕರಾದ ರಾಜು ಕಾಗೆ, ಲಕ್ಷ್ಮಣ ಸವದಿ, ರಮೇಶ ಜಾರಕಿಹೊಳಿ, ಅಭಯ ಪಾಟೀಲ, ಶಶಿಕಲಾ ಜೊಲ್ಲೆ, ಬಾಲಚಂದ್ರ ಜಾರಕಿಹೊಳಿ, ಗಣೇಶ ಹುಕ್ಕೇರಿ, ಮಹಾಂತೇಶ ಕೌಜಲಗಿ, ಮಹೇಂದ್ರ ತಮ್ಮಣ್ಣವರ ಮತ್ತಿತರರ ಆಗಮಿಸುವರು. ಜೂ.6, 7ರಂದು ಕೆಲವು ಧಾರ್ಮಿಕ ಕಾರ್ಯಕ್ರಮ ನೆರವೇರಲಿವೆ’ ಎಂದು ತಿಳಿಸಿದರು.

ADVERTISEMENT

‘ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ರೂಪಿಸಿದ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಜೈನ ಸಮುದಾಯಕ್ಕೆ ಸಿಗುತ್ತಿಲ್ಲ. ಹಾಗಾಗಿ ನಮ್ಮ ಸಮುದಾಯಕ್ಕಾಗಿಯೇ ಪ್ರತ್ಯೇಕವಾಗಿ ನಿಗಮ–ಮಂಡಳಿ ಸ್ಥಾಪಿಸಬೇಕೆಂಬ ಬೇಡಿಕೆ ಈಡೇರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಭರವಸೆ ನೀಡಿದ್ದಾರೆ. ಅದನ್ನು ಈಡೇರುತ್ತದೆ ಎಂಬ ವಿಶ್ವಾಸವೂ ಇದೆ. ಒಂದುವೇಳೆ ಬೇಡಿಕೆ ಈಡೇರದಿದ್ದರೆ ಮತ್ತೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟರು.

ಚಾರುಕೀರ್ತಿ ಸೈಬನ್ನವರ, ಸಂಜಯ ಕುಚನೂರೆ, ರಾಜೇಂದ್ರ ಜಕ್ಕನ್ನವರ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.