ಕಾಗವಾಡ: ಮಹಾರಾಷ್ಟ್ರದ ಶಿರೋಳ ತಾಲ್ಲೂಕಿನ ನಾಂದಣಿ ಜೈನ ಮಠದ ಮಹಾದೇವಿ (ಮಾಧುರಿ) ಎಂಬ ಆನೆಯನ್ನು ಅಂಬಾನಿ ಒಡೆತನದಲ್ಲಿರುವ ವಣತಾರ ಉದ್ಯಾನಕ್ಕೆ ಸ್ಥಳಾಂತರಿಸಿದ್ದು ಖಂಡನೀಯ. ಅದನ್ನು ಮರಳಿ ನಾಂದಣಿ ಜೈನ ಮಠಕ್ಕೆ ಹಿಂದಿರುಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ– ಮಹಾರಾಷ್ಟ್ರ ಗಡಿಭಾಗದ ಜೈನ ಸಮುದಾಯದವರು ಭಾನುವಾರ ನಾಂದಣಿಯಿಂದ ಕೊಲ್ಲಾಪುರದವರೆಗೆ 42 ಕೀ.ಮಿ. ಮೌನ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾಜಿ ಸಂಸದ ರಾಜು ಶೆಟ್ಟಿ ಮಾತನಾಡಿ, ‘ಕೇಂದ್ರ ಸರ್ಕಾರ ಅನ್ಯಾಯವಾಗಿ ಜೈನ ಮಠಗಳಲ್ಲಿರುವ ಆನೆಗಳನ್ನು ಉದ್ದಿಮೆ ಅಂಬಾನಿ ಅವರಿಗೆ ಒಪ್ಪಿಸುವ ಹನ್ನಾರ ಮಾಡುತ್ತಿದೆ. ಕಳೆದ ಅನೇಕ ವರ್ಷಗಳಿಂದ ಪರಂಪರೆಯಾಗಿ ಜೈನ ಮಠಗಳಲ್ಲಿ ಆನೆಗಳನ್ನು ಸಾಕಲಾಗುತ್ತಿದೆ. ಇವುಗಳನ್ನು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾತ್ರ ಬಳಸಲಾಗುತ್ತದೆ’ ಎಂದರು.
‘ಕರ್ನಾಟಕ ಮತ್ತು ಮಹಾರಾಷ್ಟ್ರದ ಜೈನ ಮಠಗಳಲ್ಲಿರುವ ಆನೆಗಳಿಗೆ ಈಗಾಗಲೇ ನೋಟಿಸ್ ನೀಡಿ ಅವುಗಳನ್ನು ಅಂಬಾನಿಯ ವನತಾರಾ ಅರಣ್ಯಕ್ಕೆ ತೆಗೆದುಕೊಂಡು ಹೋಗುವ ಹುನ್ನಾರ ನಡೆಸಲಾಗುತ್ತಿದೆ. ಇದನ್ನು ಜೈನ ಸಮಾಜ ಒಪ್ಪುವುದಿಲ್ಲ. ಕೂಡಲೇ ನಾಂದಣಿ ಮಠಕ್ಕೆ ಆನೆಯನ್ನು ವಾಪಸ್ಸು ಕಳುಹಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು’ ಎಂದರು.
‘ಈಗಾಗಲೇ ಶಿರೋಳ ತಾಲ್ಲೂಕಿನಾದ್ಯಂತ ಬೈಕಾಟ್ ಜಿಯೋ ಹ್ಯಾಶ್‌ಟ್ಯಾಗ್ ಸದ್ದು ಮಾಡುತ್ತಿದ್ದು, ಕಳೆದ ಕೆಲವೇ ಕೆಲ ದಿನಗಳಲ್ಲಿ ತಾಲ್ಲೂಕಿನ ಸಾವಿರಾರು ಜಿಯೋ ಗ್ರಾಹಕರು ಜಿಯೋದಿಂದ ನಿರ್ಗಮಿಸಿದ್ದಾರೆ. ಮುಂದೇ ಬೈಕಾಟ್ ರಿಲೈಯನ್ಸ್ ಕೂಡಾ ಸದ್ದು ಮಾಡಲಿದೆ’ ಎಂದರು.
ಪಕ್ಷಾತೀತವಾಗಿ ಎಲ್ಲ ಪಕ್ಷದ ಗಣ್ಯರು, ಶಾಸಕರು, ಮಾಜಿ ಶಾಸಕರು, ಕರ್ನಾಟಕ ಮತ್ತು ಮಹಾರಾಷ್ಟ್ರದ ಸಾವಿರಾರು ಜೈನ ಸಮಾಜದವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.