ADVERTISEMENT

ಕನ್ನಡ ಬಳಕೆ: ನೌಕರರಿಗೆ ತರಬೇತಿ

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 13:52 IST
Last Updated 31 ಅಕ್ಟೋಬರ್ 2020, 13:52 IST
ಬೆಳಗಾವಿಯಲ್ಲಿ ಕನ್ನಡ ಅನುಷ್ಠಾನ ಕುರಿತು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಸಾಹಿತಿಗಳೊಂದಿಗೆ ಶನಿವಾರ ಸಂವಾದ ನಡೆಸಿದರು
ಬೆಳಗಾವಿಯಲ್ಲಿ ಕನ್ನಡ ಅನುಷ್ಠಾನ ಕುರಿತು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಸಾಹಿತಿಗಳೊಂದಿಗೆ ಶನಿವಾರ ಸಂವಾದ ನಡೆಸಿದರು   

ಬೆಳಗಾವಿ: ‘ಜಿಲ್ಲೆಯಲ್ಲಿ ಕನ್ನಡದಲ್ಲಿ‌ ಆಡಳಿತ ಅನುಷ್ಠಾನಕ್ಕಾಗಿ ಹೊರಗುತ್ತಿಗೆಯವರು ಸೇರಿದಂತೆ ಎಲ್ಲ‌ ನೌಕರರಿಗೂ ಕನ್ನಡ ಭಾಷೆ ಬಳಕೆ ಮಾಡುವ ಕುರಿತು ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ರಾಜ್ಯೋತ್ಸವ ಅಂಗವಾಗಿ ‘ಕನ್ನಡ ಅನುಷ್ಠಾನ: ಆಗಿದ್ದೇನು? ಆಗಬೇಕಾಗಿರುವುದು ಏನು’ ವಿಷಯ ಕುರಿತು ಸಾಹಿತಿಗಳೊಂದಿಗೆ ಶನಿವಾರ ನಡೆಸಿದ ಫೇಸ್‌ಬುಕ್‌ ಲೈವ್ ಸಂವಾದದಲ್ಲಿ ಅವರು ಮಾತನಾಡಿದರು.

‘ಕನ್ನಡ ಅನುಷ್ಠಾನಕ್ಕೆ ಸರ್ಕಾರ ಹತ್ತು ಹಲವು ಕ್ರಮ ಕೈಗೊಂಡಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಕಟ್ಟುನಿಟ್ಟಿನ ಕ್ರಮ ಕೈಗೊಂಡ ಪರಿಣಾಮ ಆಡಳಿತದಲ್ಲಿ ಕನ್ನಡ ಅನುಷ್ಠಾನ ಸಮರ್ಪಕವಾಗಿ ಜಾರಿಯಾಗುತ್ತಿದೆ’ ಎಂದು ಹೇಳಿದರು.

ADVERTISEMENT

ಇಚ್ಛಾಶಕ್ತಿ ಕೊರತೆ:ಸಾಹಿತಿ ಪ್ರೊ.ಬಸವರಾಜ ಜಗಜಂಪಿ, ‘ಕನ್ನಡವು ಇಚ್ಛಾಶಕ್ತಿ ಕೊರತೆಯಿಂದಾಗಿ ಅನೇಕ ಸವಾಲು ಹಾಗೂ ಸಮಸ್ಯೆಗಳನ್ನು ಎದುರಿಸುತ್ತಿದೆ. ಮಾತೃ ಭಾಷೆಗೆ ಆದ್ಯತೆ ಕೊಡಬೇಕು. ಮಕ್ಕಳಲ್ಲಿ ಕನ್ನಡದ ಪ್ರೀತಿ ಬೆಳೆಸಬೇಕು. ಇಂಗ್ಲಿಷ್ ಮೋಹದಲ್ಲಿ ಕನ್ನಡದ ಅಸ್ಮಿತೆ ಕಳೆದು ಹೋಗದಂತೆ ಎಚ್ಚರ ವಹಿಸಬೇಕು’ ಎಂದು ಆಶಿಸಿದರು.

‘ನಾಡು-ನುಡಿ ಬಗ್ಗೆ ಅಭಿಮಾನ ಮತ್ತು ತಿಳಿವಳಿಕೆ ಹೊ‌ಂದಿದವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಬೇಕು’ ಎಂದರು.

ಕನ್ನಡ ಕಂಪು ಹರಡಿದೆ:ಸಾಹಿತಿ ಬಸವರಾಜ ಗವಿಮಠ, ‘ಕೆಲವು ದಶಕಗಳ ಹಿಂದೆ ಕನ್ನಡ ಸ್ಥಿತಿ ಈಗಿನಂತಿರಲಿಲ್ಲ. ಈಗ ಬೆಳಗಾವಿಯಂತಹ ನಗರದಲ್ಲೂ ಕನ್ನಡದ ಕಂಪು ಹರಡಿದೆ. ಅಧಿಕಾರಿ ವರ್ಗದ ನಿರಾಸಕ್ತಿಯಿಂದ ನಿರೀಕ್ಷಿತ ಮಟ್ಟದಲ್ಲಿ ಆಡಳಿತದಲ್ಲಿ ಕನ್ನಡ ಅನುಷ್ಠಾನ ಸಾಧ್ಯವಾಗಿಲ್ಲ’ ಎಂದು ಅಸಮಾಧಾನ ಆತಂಕ ವ್ಯಕ್ತಪಡಿಸಿದರು.

‘ಭಾಷೆಯನ್ನು ಹೋರಾಟದ ಜೊತೆಗೆ ಬಳಕೆ ಮೂಲಕ ಬೆಳೆಸಬೇಕು. ಅನ್ನದ ಭಾಷೆಯಾಗಿಯೂ ಬೆಳೆದಾಗ ಮಾತ್ರ ಕನ್ನಡವನ್ನು ಉತ್ತುಂಗಕ್ಕೇರಿಸಬಹುದು. ಮರಾಠಿ ಅಥವಾ ಯಾವುದೇ ಪ್ರಾದೇಶಿಕ ಭಾಷೆಯಿಂದ ಕನ್ನಡಕ್ಕೆ ಸವಾಲುಗಳಿಲ್ಲ. ಬಳಸಿದಾಗ ಮಾತ್ರ ಭಾಷೆ ಬೆಳೆಯುತ್ತದೆ’ ಎಂದು ನಾಟಕಕಾರ ಡಿ.ಎಸ್. ಚೌಗಲೆ ಪ್ರತಿಪಾದಿಸಿದರು.

ಸಾಹಿತಿ ನೀಲಗಂಗಾ ಚರಂತಿಮಠ, ‘ಭಾಷೆ ಉಳಿದಾಗ ಮಾತ್ರ ಪ್ರದೇಶ ಉಳಿಯಲು ಸಾಧ್ಯ. ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರಿಸುವ ಮೂಲಕ ಭಾಷೆಯ‌ ಬಳಕೆ ಮತ್ತು ಬೆಳವಣಿಗೆಗೆ ಸಹಕರಿಸಬೇಕು. ನಾಡಿನ ಭಾಷೆ, ಪರಂಪರೆ, ಸಂಸ್ಕೃತಿಯನ್ನು ರಕ್ಷಿಸಿಕೊಳ್ಳಬೇಕು’ ಎಂದು ಹೇಳಿದರು.

ಶಾಸನಬದ್ಧ ಅವಕಾಶ ಕಲ್ಪಿಸಬೇಕು:ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ‘ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆ ರಕ್ಷಿಸಬೇಕು ಎಂಬುದು ಕೇಂದ್ರ ಸರ್ಕಾರದ ಆಶಯವೂ ಆಗಿದೆ. ಇದಕ್ಕೆ ಶಾಸನಬದ್ಧ ಅವಕಾಶ ಕಲ್ಪಿಸಬೇಕು. ಇಂಗ್ಲಿಷ್ ಮಾಧ್ಯಮ‌ ಹಾವಳಿಯಿಂದ ಕನ್ನಡ ಮತ್ತು ಮರಾಠಿ ಭಾಷಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎಂದು ತಿಳಿಸಿದರು.

ಪತ್ರಕರ್ತ ಮೆಹಬೂಬ್ ಮಕಾನದಾರ, ‘ಗಡಿ‌ ಗಟ್ಟಿಯಾಗಬೇಕಾದರೆ ಕನ್ನಡ ಶಾಲೆಗಳನ್ನು ಗಟ್ಟಿಗೊಳಿಸಬೇಕು’ ಎಂದರು.

ಜಿಲ್ಲಾಧಿಕಾರಿಯು, ‘ಕನ್ನಡವೆಂದರೆ ಕುಣಿಯುವೆನು.... ಕನ್ನಡವೆಂದರೆ ಮಣಿಯುವೆನು...’ ಎಂದು ಹಾಡಿದ್ದು ಗಮನಸೆಳೆಯಿತು.

ವಾರ್ತಾ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.