ಬೆಳಗಾವಿ: ಮುಂಗಾರು ಹಂಗಾಮಿನ ಪೂರ್ವದಲ್ಲಿ ಸುರಿದ ಉತ್ತಮ ಮಳೆಯಿಂದ ಸಂತಸಗೊಂಡಿದ್ದ ಜಿಲ್ಲೆಯ ರೈತರನ್ನು ಈಗ ಮುಂಗಾರು ಮಳೆಯೂ ಕೈಹಿಡಿದಿದೆ. ಸತತವಾಗಿ ಅಬ್ಬರಿಸುತ್ತಿರುವ ವರುಣ ಉತ್ತಮ ಫಸಲು ಕೈಗೆಟುಕುತ್ತದೆ ಎಂಬ ಆಶಾಭಾವ ಮೂಡಿಸಿದ್ದಾನೆ.
ಬೆಳಗಾವಿ, ಖಾನಾಪುರ ತಾಲ್ಲೂಕುಗಳಲ್ಲಿ ಬಿಟ್ಟುಬಿಡದೆ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ, ಹೊಲಗಳಲ್ಲಿ ನೀರು ನಿಂತು ಕೃಷಿ ಚಟುವಟಿಕೆ ಸ್ಥಗಿತಗೊಂಡಿವೆ. ಆದರೆ, ಸಾಧಾರಣ ಮಳೆ ಇರುವ ಉಳಿದ ತಾಲ್ಲೂಕುಗಳಲ್ಲಿ ಬಿತ್ತನೆ ಚಟುವಟಿಕೆ ಬಿರುಸು ಪಡೆದಿವೆ.
ಜಿಲ್ಲೆಯಲ್ಲಿ ಜೂನ್ 1ರಿಂದ 25ರವರೆಗೆ 113.8 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ, ವಾಸ್ತವದಲ್ಲಿ 178.6(ಶೇ 57ರಷ್ಟು ಹೆಚ್ಚು) ಮಳೆಯಾಗಿದೆ. ಹುಕ್ಕೇರಿ, ಖಾನಾಪುರ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿದ್ದರೆ, ಮೂಡಲಗಿ ತಾಲ್ಲೂಕಿನಲ್ಲಿ ಮಾತ್ರ ವಾಡಿಕೆಗಿಂತ ಶೇ 21ರಷ್ಟು ಕಡಿಮೆ ಮಳೆಯಾಗಿದೆ.
ಶೇ 75ರಷ್ಟು ಬಿತ್ತನೆ ಪೂರ್ಣ: ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 7,32,361 ಹೆಕ್ಟೇರ್‌ನಲ್ಲಿ ಬಿತ್ತನೆಗೆ ಕೃಷಿ ಇಲಾಖೆ ಗುರಿ ಹಾಕಿಕೊಂಡಿತ್ತು. ಈ ಪೈಕಿ ಜೂನ್ 25ರವರೆಗೆ 5,55,863 ಹೆಕ್ಟೇರ್‌ನಲ್ಲಿ (ಶೇ 75ರಷ್ಟು) ಬಿತ್ತನೆ ಪ್ರಕ್ರಿಯೆ ಪೂರ್ಣಗೊಂಡಿದೆ. ರಾಮದುರ್ಗ ತಾಲ್ಲೂಕಿನಲ್ಲಿ ಅತಿ ಹೆಚ್ಚು(ಶೇ 94) ಬಿತ್ತನೆಯಾಗಿದ್ದರೆ, ಯರಗಟ್ಟಿ ತಾಲ್ಲೂಕಿನಲ್ಲಿ ಅತಿ ಕಡಿಮೆ(ಶೇ 49) ಬಿತ್ತನೆಯಾಗಿದೆ.
ಹೆಸರು, ಉದ್ದು ಬೆಳೆಗಳ ಬಿತ್ತನೆಯಲ್ಲಿ ಗುರಿ ಮೀರಿದ ಸಾಧನೆಯಾಗಿದೆ. ಹತ್ತಿ, ಗೋವಿನಜೋಳ ಮತ್ತಿತರ ಬೆಳೆಗಳ ಬಿತ್ತನೆ ಭರದಿಂದ ಸಾಗಿದೆ. ಕೆಲವು ರೈತರು ಈಗಾಗಲೇ ಬಿತ್ತಿದ್ದರೆ, ಇನ್ನೂ ಕೆಲವರು ಬಿತ್ತನೆಗಾಗಿ ಭೂಮಿ ಹದಗೊಳಿಸುತ್ತಿದ್ದಾರೆ.
‘ಬೆಳಗಾವಿ, ಖಾನಾಪುರ ತಾಲ್ಲೂಕುಗಳಲ್ಲಿ ಭತ್ತ ಬೆಳೆಯುವ ರೈತರು ಮೊದಲು ಸಸಿ ಸಿದ್ಧಪಡಿಸಿ, ನಂತರ ನಾಟಿ ಮಾಡುತ್ತಾರೆ. ಮುಂಗಾರು ಹಂಗಾಮಿನ ಬಿತ್ತನೆ ಚಟುವಟಿಕೆ ಮುಗಿಯಲು ಜುಲೈ 15ರವರೆಗೆ ಸಮಯವಿದೆ. ಅಷ್ಟರೊಳಗೆ ಶೇ 100ರಷ್ಟು ಬಿತ್ತನೆಯಾಗುತ್ತದೆ. ಪೋಷಕಾಂಶಗಳ ಕೊರತೆಯಿಂದ ಹೆಸರು ಬೆಳೆ ಹಳದಿ ಬಣ್ಣಕ್ಕೆ ತಿರುಗಿತ್ತು. ಪೋಷಕಾಂಶ ಒದಗಿಸಿದ ನಂತರ ಸಮಸ್ಯೆ ಬಗೆಹರಿದಿದೆ’ ಎಂದು ಕೃಷಿ ಇಲಾಖೆ ಜಂಟಿನಿರ್ದೇಶಕ ಎಚ್.ಡಿ.ಕೋಳೇಕರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸತತ ಮಳೆಯಿಂದ ಬೈಲಹೊಂಗಲ ತಾಲ್ಲೂಕಿನ ಕೃಷಿಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಅಥವಾ ಅಪಾರ ಪ್ರಮಾಣದಲ್ಲಿ ನಿಂತ ಮಳೆ ನೀರಿನಿಂದಾಗಿ ಹೆಸರು ಬೆಳೆ ನಷ್ಟವಾಗಿದೆ. ಮಣ್ಣಿನ ತೇವಾಂಶ ಸಹಕರಿಸಿದರೆ ಅದೇ ಭೂಮಿಯಲ್ಲಿ ಹತ್ತಿ, ಈರುಳ್ಳಿ, ಮೆಕ್ಕೆಜೋಳ, ತೊಗರಿ, ಶೇಂಗಾ ಅಥವಾ ಸೋಯಾಬೀನ್ ಬೆಳೆಯಬಹುದು’ ಎಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಲಹೆ ಕೊಟ್ಟಿದ್ದಾರೆ.
‘ಎರಡನೇ ಸಲ ಬಿತ್ತಿದೆವು’
‘16 ಎಕರೆ ಕೃಷಿಭೂಮಿ ಇದ್ದು ಹತ್ತಿ ಹೆಸರು ಉದ್ದು ಕಬ್ಬು ಮೊದಲಾದ ಬೆಳೆ ಬೆಳೆಯುತ್ತೇವೆ. ಈ ಹಿಂದೆ ಸೋಯಾಬೀನ್ ಹೆಸರು ಬಿತ್ತಿದ ನಂತರ ಸತತವಾಗಿ ಮಳೆ ಸುರಿಯಿತು. ಇದರಿಂದ ಬಿತ್ತನೆ ಬೀಜ ಮೊಳಕೆಯೊಡೆಯದೆ ಎರಡನೇ ಸಲ ಬಿತ್ತಿದೆವು. ಈಗ ಹತ್ತಿ ಬಿತ್ತನೆಗೆ ಎಡೆ ಹೊಡೆಯುತ್ತಿದ್ದೇನೆ. ಈ ಸಲ ವರುಣ ಕೈಹಿಡಿದಿದ್ದಾನೆ. ಆದರೆ ಬಿಡುವು ಕೊಟ್ಟು ಮಳೆ ಸುರಿದರೆ ಅನುಕೂಲವಾಗುತ್ತದೆ’ ಎಂದು ಸವದತ್ತಿ ತಾಲ್ಲೂಕಿನ ಹಿಟ್ಟಣಗಿಯ ರೈತ ಸುರೇಶ ಸಂಪಗಾವಿ ‘ಪ್ರಜಾವಾಣಿ’ಗೆ ತಿಳಿಸಿದರು.
ನೀರಲ್ಲೇ ಗೆಣಸು ಕೀಳಬೇಕು...
ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿ ಹೊರವಲಯದ ಯಳ್ಳೂರ ರಸ್ತೆಯ ಗದ್ದೆಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತಿದೆ. ಇದರ ಮಧ್ಯೆಯೇ ರೈತರು ತಾವು ಬೆಳೆದ ಸಿಹಿ ಗೆಣಸಿನ ಬೆಳೆ ಕೀಳುತ್ತಿದ್ದಾರೆ. ‘ಕೊಯ್ಲು ಪ್ರಕ್ರಿಯೆ ವಿಳಂಬವಾಗಿದ್ದರಿಂದ ಮತ್ತು ಮಳೆ ನೀರಿನಿಂದಾಗಿ ಗೆಣಸಿನ ಬೆಳೆ ಕೊಳೆಯುವ ಭೀತಿ ನಮ್ಮನ್ನು ಕಾಡುತ್ತಿದೆ. ಹಾಗಾಗಿ ಮಳೆಯನ್ನೂ ಲೆಕ್ಕಿಸದೆ ಕಟಾವು ಮಾಡುತ್ತಿದ್ದೇವೆ’ ಎಂದು ರೈತ ರಾಜು ಮರ್ವೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.