ADVERTISEMENT

ಲಕ್ಷ್ಮಿ ಹೆಬ್ಬಾಳಕರ ಜನ್ಮ ದಿನಾಚರಣೆ: ಐದು ಸೇವಾ ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಮೇ 2022, 13:25 IST
Last Updated 12 ಮೇ 2022, 13:25 IST
ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡಿರುವ ಸೇವಾ ಕಾರ್ಯಗಳಿಗೆ ಹಿರೇಬಾಗೇವಾಡಿ ದರ್ಗಾದ ಸೈಯದ್ ಅಶ್ರಫ್ ಫೀರ್ ಖಾದ್ರಿ, ಮು‌ತ್ನಾಳ ಕೇದಾರಪೀಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮತ್ತು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಗುರುವಾರ ಚಾಲನೆ ನೀಡಿದರು
ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡಿರುವ ಸೇವಾ ಕಾರ್ಯಗಳಿಗೆ ಹಿರೇಬಾಗೇವಾಡಿ ದರ್ಗಾದ ಸೈಯದ್ ಅಶ್ರಫ್ ಫೀರ್ ಖಾದ್ರಿ, ಮು‌ತ್ನಾಳ ಕೇದಾರಪೀಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮತ್ತು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಗುರುವಾರ ಚಾಲನೆ ನೀಡಿದರು   

ಬೆಳಗಾವಿ: ಇಲ್ಲಿನ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಜನ್ಮದಿನವನ್ನು ಐದು ವೈವಿಧ್ಯಮಯ ಮತ್ತು ವಿಧಾಯಕ ಕಾರ್ಯಕ್ರಮಗಳೊಂದಿಗೆ ಗುರುವಾರ ಆಚರಿಸಲಾಯಿತು.

ಶಾಸಕರ ಗೃಹ ಕಚೇರಿ ಆವರಣದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಯೋಜನೆಗಳಿಗೆ ಚಾಲನೆ ನೀಡಲಾಯಿತು. ಮುತ್ನಾಳ ಕೇದಾರಪೀಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಹಿರೇಬಾಗೇವಾಡಿ ದರ್ಗಾದ ಸೈಯದ್ ಅಶ್ರಫ್ ಫೀರ್ ಖಾದ್ರಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ತಾಲ್ಲೂಕಿನ ಲೈನ್‌ಮನ್‌ಗಳನ್ನು ಸನ್ಮಾನಿಸುವುದು ಮತ್ತು ಅವರಿಗೆ ಜಾಕೆಟ್‌ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು. ತಾಲ್ಲೂಕಿನ 8, 9 ಮತ್ತು 10ನೇ ತರಗತಿಯ ಸುಮಾರು 15ಸಾವಿರ ವಿದ್ಯಾರ್ಥಿಗಳಿಗೆ ವಿಶೇಷವಾಗಿ ರೂಪಿಸಿದ ಶಿಕ್ಷಣ ಮಾರ್ಗಸೂಚಿಯ ಡೈಜೆಸ್ಟ್‌ಗಳ ವಿತರಣೆಗೆ ಚಾಲನೆ ನೀಡಲಾಯಿತು. ಲಕ್ಷ್ಮಿ ನೇತೃತ್ವದಲ್ಲಿ ಇವುಗಳನ್ನು ರೂಪಿಸಲಾಗಿದೆ.

ADVERTISEMENT

ಬ್ಯಾಗ್, ಕ್ರೀಡಾ ಸಾಮಗ್ರಿ:ಕ್ಷೇತ್ರದ ಪ್ರತಿ ಪ್ರೌಢಶಾಲೆಯ ಪ್ರಥಮ, ದ್ವಿತೀಯ ಹಾಗೂ ತೃತೀಯ ಶ್ರೇಣಿಗಳಲ್ಲಿ ಪಾಸಾದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಬ್ಯಾಗ್‌ಗಳ ವಿತರಣೆ, ಕ್ಷೇತ್ರದ 25 ಪ್ರಾಥಮಿಕ ಶಾಲೆಗಳಿಗೆ ಜಿಮ್ ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸುವ ಯೋಜನೆ ಹಾಗೂ ಕ್ಷೇತ್ರದ ಪ್ರತಿ ಮನೆ ಮನೆಗೆ ಸಸಿಗಳನ್ನು ವಿತರಿಸಿ, ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೂ ಚಾಲನೆ ಕೊಡಲಾಯಿತು.

ಈ ವೇಳೆ ಮಾತನಾಡಿದ ಚನ್ನರಾಜ, ‘ತರಗತಿಯೊಳಗಿನ ಶಿಕ್ಷಣದಷ್ಟೇ ದೈಹಿಕ ಶಿಕ್ಷಣವೂ ಮಕ್ಕಳಿಗೆ ಮುಖ್ಯ. ಹಾಗಾಗಿ ಕ್ಷೇತ್ರದ ಪ್ರತಿ ಮಗುವಿನ ಸರ್ವತೋಮುಖ ಬೆಳವಣಿಗೆಗಾಗಿ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಇದು ಆರಂಭವಷ್ಟೆ. ಶಾಸಕರ ಅನುದಾನ, ಸರ್ಕಾರದ ವಿವಿಧ ಯೋಜನೆಗಳಲ್ಲದೆ ಲಕ್ಷ್ಮಿ ತಾಯಿ ಪ್ರತಿಷ್ಠಾನದಿಂದಲೂ ಹಲವು ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

‘4 ವರ್ಷದಲ್ಲಿ ಕ್ಷೇತ್ರದ ಚಿತ್ರಣವನ್ನೇ ಬದಲಿಸಲಾಗಿದೆ. ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಯೋಜನೆಗಳು ಬಂದಿವೆ. ಜನರು ಶಾಸಕಿ ಹೆಬ್ಬಾಳಕರ ಅವರನ್ನು ಅಕ್ಷರಶಃ ತಮ್ಮ ಮನೆ ಮಗಳು ಎನ್ನುವಂತೆ ಕಾಣುತ್ತಿದ್ದಾರೆ. ಅವರ ವಿಶ್ವಾಸಕ್ಕೆ ತಕ್ಕಂತೆ ನಡೆದುಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳ ಮೂಲಕ ಸೇವೆ ಮಾಡಲಾಗುವುದು’ ಎಂದು ಹೇಳಿದರು.

ಹಿಂದುಳಿದಿತ್ತು:ಮುಖಂಡ ಶಂಕರಗೌಡ ಪಾಟೀಲ, ‘ಹಿಂದಿನ ಅವಧಿಯಲ್ಲಿ ಗ್ರಾಮೀಣ ಕ್ಷೇತ್ರ ಸಾಕಷ್ಟು ಹಿಂದುಳಿದಿತ್ತು. ಈಗ ಚಿತ್ರಣವೇ ಬದಲಾಗಿದೆ. ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ’ ಎಂದರು.

ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಮುಖಂಡರಾದ ಗಂಗಣ್ಣ ಕಲ್ಲೂರ, ಸಿ.ಸಿ. ಪಾಟೀಲ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ, ನಾಗೇಶ ದೇಸಾಯಿ, ಅಡಿವೇಶ ಇಟಗಿ, ಯಲ್ಲಪ್ಪ ಡೇಕೋಲ್ಕರ್, ಬಿ.ಎನ್. ಪಾಟೀಲ, ಸಾತೇರಿ ಬೆಳವಟ್ಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.