ADVERTISEMENT

ರಮೇಶ್ ಜಾರಕಿಹೊಳಿ ಬಿಜೆಪಿಯಲ್ಲಿ ಸೆಟ್ಲ್ ಆದಂತಿಲ್ಲ: ಲಕ್ಷ್ಮಿ ಟಾಂಗ್‌

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 14:06 IST
Last Updated 15 ಫೆಬ್ರುವರಿ 2021, 14:06 IST
ಲಕ್ಷ್ಮಿ ಹೆಬ್ಬಾಳಕರ
ಲಕ್ಷ್ಮಿ ಹೆಬ್ಬಾಳಕರ   

ಬೆಳಗಾವಿ: ‘ಸಿದ್ದರಾಮಯ್ಯ ಇಂದಿಗೂ ನಮ್ಮ ನಾಯಕರು, ದಿನಕ್ಕೆರಡು ಬಾರಿ ಅವರೊಂದಿಗೆ ಮಾತನಾಡುತ್ತೇನೆ’ ಎಂಬ ಹೇಳಿಕೆ ನೀಡಿರುವ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಇನ್ನೂ ಬಿಜೆಪಿಯಲ್ಲಿ ಸೆಟ್ಲ್ ಆದಂತಿಲ್ಲ. ಎರಡು ದೋಣಿಯಲ್ಲಿ ಕಾಲಿಟ್ಟಿರುವಂತಿದೆ’ ಎಂದು ಕೆಪಿಸಿಸಿ ವಕ್ತಾರರೂ ಆಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಟಾಂಗ್ ನೀಡಿದ್ದಾರೆ.

ಗ್ರಾಮೀಣ ಕ್ಷೇತ್ರದ ಕಾರ್ಯಕ್ರಮದಲ್ಲಿ ಸಚಿವರು ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿರುವ ಶಾಸಕಿ, ‘ಸಚಿವರು ಇನ್ನೂ ಕಾಂಗ್ರೆಸ್ ಜೊತೆ ಸಂಬಂಧ ಇರಿಸಿಕೊಂಡಿದ್ದಾರೆಂದರೆ ಅವರಿಗೆ ಬಿಜೆಪಿಯಲ್ಲಿ ಹೊಂದಾಣಿಕೆಯಾಗುತ್ತಿಲ್ಲ ಎನಿಸುತ್ತಿದೆ. ಮತ್ತೆ ಕಾಂಗ್ರೆಸ್ ಗೆ ಮರಳಲು ಪ್ರಯತ್ನಿಸುತ್ತಿದ್ದಾರೋ ಅಥವಾ ಕಾಂಗ್ರೆಸ್ ಸಂಪರ್ಕದಲ್ಲಿದ್ದೇನೆ ಎನ್ನುವ ಮೂಲಕ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದಾರೋ?’ ಎಂದು ಕೇಳಿದ್ದಾರೆ.

‘ಗ್ರಾಮೀಣ ಕ್ಷೇತ್ರದ 22 ಗ್ರಾಮ ಪಂಚಾಯ್ತಿಗಳ ಸದಸ್ಯರು ಸನ್ಮಾನ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ಸಚಿವರು ಸುಳ್ಳು ಹೇಳಿದ್ದಾರೆ. ಅರ್ಧದಷ್ಟು ಗ್ರಾಮ ಪಂಚಾಯ್ತಿ ಸದಸ್ಯರೂ ಅವರ ಕಾರ್ಯಕ್ರಮಕ್ಕೆ ಹೋಗಿಲ್ಲ. ಕೆಲವರು ಸಚಿವರ ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವಂತಿದೆ. ಸದಸ್ಯರಲ್ಲದವರನ್ನೂ ಕರೆದು ಕೂರಿಸಿ ಸನ್ಮಾನ ಮಾಡಲಾಗಿದೆ’ ಎಂದು ಟೀಕಿಸಿದ್ದಾರೆ.

ADVERTISEMENT

‘ಸಚಿವರಾಗಿ ಜವಾಬ್ದಾರಿಯುತವಾಗಿ ಮಾತನಾಡಬೇಕು. ನಾಲಗೆಯ ಮೇಲೆ ಅವರಿಗೆ ಹಿಡಿತವಿಲ್ಲ. ನನ್ನನ್ನು ಶಾಸಕಿಯನ್ನಾಗಿ ಮಾಡಿದ್ದು ಕ್ಷೇತ್ರದ ಜನರೆ ಹೊರತು ಅವರಲ್ಲ. ಅವರು ಬೆನ್ನಿಗೆ ಚೂರಿ ಹಾಕುವ ಕೆಲಸ ಬಿಟ್ಟು ಬೇರೇನೂ ಮಾಡಿಲ್ಲ. 2023ರ ಚುನಾವಣೆಯಲ್ಲಿ ಅಭಿವೃದ್ಧಿಗೆ ಮತ ನೀಡುವ ಮೂಲಕ ಜನರು ಅವರಿಗೆ ಬುದ್ಧಿ ಕಲಿಸಲಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.