ADVERTISEMENT

ಬೆಳಗಾವಿ: ರಸ್ತೆ ವಿಭಜಕಕ್ಕೆ ಲಾರಿ ಡಿಕ್ಕಿ; ಬ್ಯಾಟರಿ ಸ್ಫೋಟ, ಟೋಲ್ ನಾಕಾಗೆ ಬೆಂಕಿ

ಕೂಗನೊಳ್ಳಿ ಟೋಲ್ ನಾಕಾಗೆ ಬೆಂಕಿ: ಅಪಾರ ಹಾನಿ, ರಾಷ್ಟ್ರೀಯ ಹೆದ್ದಾರಿ ಸಂಚಾರ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 21 ಮೇ 2025, 18:29 IST
Last Updated 21 ಮೇ 2025, 18:29 IST
   

ಬೆಳಗಾವಿ: ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನಲ್ಲಿರುವ ಕರ್ನಾಟಕ- ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ ಕೂಗನೊಳ್ಳಿ ಟೋಲ್ ನಾಕಾ ಬುಧವಾರ ರಾತ್ರಿ ಬೆಂಕಿಗೆ ಆಹುತಿಯಾಗಿದೆ. ಘಟನೆಯಲ್ಲಿ ಲಾರಿ ಸಂಪೂರ್ಣ ಸುಟ್ಟಿದ್ದು, ಯಾವುದೇ ಪ್ರಾಣಹಾನಿ ಆಗಿಲ್ಲ.

ಲಾರಿಯೊಂದು ಬೆಳಗಾವಿಯಿಂದ ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಹೊರಟಿತ್ತು.

ಬುಧವಾರ ರಾತ್ರಿ ಕೂಗನೊಳ್ಳಿ ಟೋಲ್ ನಾಕಾ ಬಳಿ ಲಾರಿ ಟೋಲ್ ದಾಟಲು ಬಂದು‌ ನಿಂತಿತು. ಲಾರಿಯನ್ನು ಚಾಲಕ ತುಸು ಹಿಂದಕ್ಕೆ ಚಲಿಸುವಾಗ ಆಯಿಲ್ ಟ್ಯಾಂಕ್ ರಸ್ತೆಯ ವಿಭಜಕಕ್ಕೆ‌ ಗುದ್ದಿತು. ಅದರಿಂದ ಹೊತ್ತಿಕೊಂಡ ಬೆಂಕಿ ಕಿಡಿಗಳು ಪಕ್ಕದಲ್ಲಿಯೇ ಇದ್ದ ಲಾರಿಯ ಬ್ಯಾಟರಿಗೆ ತಾಗಿದವು. ಬ್ಯಾಟರಿ ಸ್ಫೋಟಗೊಂಡು ಏಕಾಏಕಿ ಬೆಂಕಿ ಹೊತ್ತಿಕೊಂಡಿತು.

ADVERTISEMENT

ನೋಡನೋಡುತ್ತಿದ್ದಂತೆಯೇ ಬೆಂಕಿ‌‌ ಕೆನ್ನಾಲಿಗೆ ಟೋಲ್ ನಾಕಾದ ಟೋಲ್ ಕಲೆಕ್ಷನ್ ಕೇಂದ್ರಗಳಿಗೂ ವ್ಯಾಪಿಸಿತು. ಟೋಲ್ ನಾಕಾದ ಸಿಬ್ಬಂದಿ ಹಾಗೂ ಲಾರಿಯಲ್ಲಿದ್ದವರು ದೂರ ಓಡಿ ಹೋದರು. ನಾಕಾದ ಎರಡು ಕಲೆಕ್ಷನ್ ಕೇಂದ್ರಗಳು ಸುಟ್ಟುಹೋದವು.

ನಂತರ ಬಂದ ನಿಪ್ಪಾಣಿ ಅಗ್ನಿಶಾಮಕ ‌ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ಮಹಾರಾಷ್ಟ್ರ‌ ಹಾಗೂ ಕರ್ನಾಟಕದ ಮಧ್ಯೆ ಸಂಚರಿಸಬೇಕಾದ ವಾಹನಗಳು‌ ತಡರಾತ್ರಿಯವರೆಗೂ ಸಾಲುಗಟ್ಟಿ ನಿಂತವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.