ADVERTISEMENT

ವಾರಾಂತ್ಯ ಕರ್ಫ್ಯೂಗೆ ಮಿಶ್ರ ಪ್ರತಿಕ್ರಿಯೆ

ಪ್ರಮುಖ ವೃತ್ತಗಳಲ್ಲಷ್ಟೆ ಪೊಲೀಸರ ನಿಗಾ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 13:26 IST
Last Updated 15 ಜನವರಿ 2022, 13:26 IST
ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಳಗಾವಿಯ ಗಣಪತಿ ಗಲ್ಲಿಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆಪ್ರಜಾವಾಣಿ ಚಿತ್ರ
ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಳಗಾವಿಯ ಗಣಪತಿ ಗಲ್ಲಿಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆಪ್ರಜಾವಾಣಿ ಚಿತ್ರ   

ಬೆಳಗಾವಿ: ಕೋವಿಡ್ ಸೋಂಕು ಹರಡುವಿಕೆ ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ 2ನೇ ವಾರಾಂತ್ಯ ಕರ್ಫ್ಯೂವಿನ ಮೊದಲನೇ ದಿನವಾದ ಶನಿವಾರ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದಲ್ಲಿ ಆಸ್ಪತ್ರೆಗಳು, ಔಷಧಿ ಅಂಗಡಿಗಳು, ಬೇಕರಿಗಳು, ಕಿರಾಣಿ, ಹಣ್ಣು, ತರಕಾರಿ ಮತ್ತು ಹಾಲು ಮೊದಲಾದ ಅವಶ್ಯ ಸಾಮಗ್ರಿಗಳ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ವಾಣಿಜ್ಯ ಮಳಿಗೆಗಳನ್ನು ಮುಚ್ಚಲಾಗಿತ್ತು. ಪ್ರಮುಖ ಮಾರುಕಟ್ಟೆ ಸ್ಥಳಗಳಾದ ಖಡೇಬಜಾರ್, ಸಮಾದೇವಿ ಗಲ್ಲಿ, ಗಣಪತಿ ಗಲ್ಲಿ, ಕಿರ್ಲೋಸ್ಕರ್‌ ಗಲ್ಲಿ, ಮಾರುತಿ ಗಲ್ಲಿ ಮೊದಲಾದವು ಬಿಕೋ ಎನ್ನುತ್ತಿದ್ದವು. ಮುಖ್ಯ ರಸ್ತೆ, ವೃತ್ತಗಳಲ್ಲಿ ಮಾತ್ರವೇ ಪೊಲೀಸರು ನಿಗಾ ವಹಿಸಿದ್ದರು. ಉಳಿದ ಕಡೆಗಳಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಆಗಲಿಲ್ಲ.

ಎಲೆಕ್ಟ್ರಾನಿಕ್ ವಸ್ತುಗಳು, ಪೀಠೋಪಕರಣ, ಚಿನ್ನಾಭರಣ ಮಾರಾಟ ಮಳಿಗೆಗಳು, ಬಟ್ಟೆ, ಹಾರ್ಡ್‌ವೇರ್, ಬ್ಯಾಂಗಲ್ಸ್‌ ಸ್ಟೋರ್ಸ್, ಮೊಬೈಲ್ ಫೋನ್‌ ಅಂಗಡಿಗಳು, ಇಂಟರ್‌ನೆಟ್ ಸೆಂಟರ್, ಸಾಮಾನ್ಯ ಸೇವಾ ಕೇಂದ್ರಗಳು, ಗೃಹೋಪಯೋಗಿ ವಸ್ತುಗಳು ಮೊದಲಾದವುಗಳ ಮಳಿಗೆಗಳು ಬಾಗಿಲು ಮುಚ್ಚಿದ್ದವು.

ADVERTISEMENT

ಶುಕ್ರವಾರ ರಾತ್ರಿ 10ರಿಂದಲೇ ವಾರಾಂತ್ಯ ಕರ್ಫ್ಯೂ ಆರಂಭವಾಗಿದ್ದು, ಸೋಮವಾರ ಬೆಳಿಗ್ಗೆವರೆಗೂ ಜಾರಿಯಲ್ಲಿರಲಿದೆ. ಅದರಂತೆ ಅನುಷ್ಠಾನಕ್ಕೆ ಪೊಲೀಸರು ರಾಣಿ ಚನ್ನಮ್ಮ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ನಿರ್ಬಂಧ ವಿಧಿಸಿದ್ದಾರೆ. ಅನವಶ್ಯವಾಗಿ ಓಡಾಡುತ್ತಿದ್ದವರಿಂದ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಮಾಸ್ಕ್‌ ಧರಿಸದೆ ಸಂಚರಿಸುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದೆಲ್ಲವೂ ಪ್ರಮುಖ ವೃತ್ತಗಳಲ್ಲಷ್ಟೆ ನಡೆಯಿತು. ಇತರ ರಸ್ತೆಗಳು ಮತ್ತು ಹೊರವಲಯದಲ್ಲಿ ವಾಹನಗಳ ಸಂಚಾರಕ್ಕೆ ಅಡೆತಡೆ ಇರಲಿಲ್ಲದಿರುವುದು ಕಂಡುಬಂತು.

ಕೋವಿಡ್ ಹಾಗೂ ವಾರಾಂತ್ಯ ಕರ್ಫ್ಯೂ ಮಕರ ಸಂಕ್ರಾಂತಿ ಸಡಗರದ ಮೇಲೆ ಮಂಕು ಕವಿಯುವಂತೆ ಮಾಡಿತು. ಮನೆಗಳಿಗಷ್ಟೆ ಹಬ್ಬ ಸೀಮಿತವಾಯಿತು. ಮಕ್ಕಳು, ಬಾಲಕಿಯರು ನೆರೆ–ಹೊರೆಯವರಿಗೆ ಎಳ್ಳು–ಬೆಲ್ಲವನ್ನು ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು.

ರಾಯಬಾಗ, ಬೈಲಹೊಂಗಲ, ಖಾನಾಪುರ ಪಟ್ಟಣದಲ್ಲಿ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇತರ ಕಡೆಗಳಲ್ಲಿ ಜನರಿಂದ ಮಿಶ್ರ ಪ್ರತಿಕ್ರಿಯೆ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.