ADVERTISEMENT

ಸಂತ್ರಸ್ತರ ಬದುಕು ಹಸನಾಗಿಸಲು ಶ್ರಮಿಸಿ

ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 14:38 IST
Last Updated 1 ನವೆಂಬರ್ 2019, 14:38 IST
ಗೋಕಾಕದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿದರು
ಗೋಕಾಕದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿದರು   

ಗೋಕಾಕ: ‘ನೆರೆಪೀಡಿತ ಗ್ರಾಮಗಳಿಗೆ ಅಧಿಕಾರಿಗಳು ವಾರದೊಳಗಾಗಿ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಬೇಕು. ಸಂತ್ರಸ್ತರ ಅಳಲು ಆಲಿಸಿ ಅವರ ಬದುಕು ಹಸನಾಗಿಸಬೇಕು. ಕೆಲವು ಕುಟುಂಬಗಳು ಇನ್ನೂ ಶಾಲೆ, ದೇವಸ್ಥಾನಗಳಲ್ಲಿ ವಾಸಿಸುತ್ತಿದ್ದು ಅಂಥವರಿಗೆ ಕೂಡಲೇ ಶೆಡ್‌ಗಳನ್ನು ನಿರ್ಮಿಸಿಕೊಡಬೇಕು’ ಎಂದು ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸೂಚನೆ ನೀಡಿದರು.

ಶುಕ್ರವಾರ ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗೋಕಾಕ ಹಾಗೂ ಮೂಡಲಗಿ ತಾಲ್ಲೂಕುಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ನಿಜವಾದ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವ ಕೆಲಸವನ್ನು ಆದ್ಯತೆ ಮೇರೆಗೆ ಮಾಡಬೇಕು’ ಎಂದು ತಾಕೀತು ಮಾಡಿದರು.

ADVERTISEMENT

‘ಸರ್ಕಾರದ ಮಾರ್ಗಸೂಚಿಯಂತೆ ಸಂಪೂರ್ಣ ಬಿದ್ದ ಮನೆಗಳನ್ನು ‘ಸಿ’ ಎಂದು ವರ್ಗೀಕರಣ ಮಾಡಲಾಗಿದೆ. ಇವುಗಳನ್ನು ಖುದ್ದಾಗಿ ಪರಿಶೀಲಿಸಿ ‘ಎ’ ಅಥವಾ ‘ಬಿ’ ವರ್ಗದಲ್ಲಿ ಸೇರಿಸಬೇಕು. ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಬೇಕು. ಮನೆಗಳು ಬಿದ್ದಿದ್ದರೂ ಪಟ್ಟಿಯಲ್ಲಿ ಅವರ ಹೆಸರು ಸೇರಿಲ್ಲ. ಅವರಿಗೆ ನೆರವಾಗಬೇಕು’ ಎಂದರು.

‘ಅಡಿಬಟ್ಟಿ ಗ್ರಾಮವು ಸ್ಥಳಾಂತರಗೊಂಡಿದ್ದು, ನಿವೇಶನ ಸಂಬಂಧ ನೀಡಿರುವ 21ಎಕರೆ 17ಗುಂಟೆ ಜಮೀನನ್ನು ಕೂಡಲೇ ಸರ್ವೇ ಮಾಡಿ ಹಕ್ಕುಪತ್ರಗಳನ್ನು ಅಲ್ಲಿನ ಕುಟುಂಬಗಳಿಗೆ ನೀಡಬೇಕು. ಜಾಗ ಹಂಚಿಕೆ ಮಾಡಬೇಕು. ಹಕ್ಕುಪತ್ರ ಹೊಂದದ ಹೊಸ ಕುಟುಂಬಗಳಿಗೆ ನಿವೇಶನ ಕಲ್ಪಿಸಬೇಕು. ಕೃಷ್ಣಾ ನದಿ ಹಿನ್ನೀರಿನಿಂದ ಹುಣಶ್ಯಾಳ ಪಿವೈ ಗ್ರಾಮವು ಸ್ಥಳಾಂತರಗೊಂಡಿದ್ದು, ರಿ.ಸ.ನಂ. 108ರಲ್ಲಿ ಈಗಿರುವ ಅಳತೆಯನ್ನು ಕಡಿಮೆಗೊಳಿಸಿ ನಿವೇಶನಗಳನ್ನು ಮರುಹಂಚಿಕೆ ಮಾಡಬೇಕು’ ಎಂದು ನಿರ್ದೇಶನ ನೀಡಿದರು.

‘ಹುಣಶ್ಯಾಳ ಪಿಜಿ, ಢವಳೇಶ್ವರ, ಅರಳಿಮಟ್ಟಿ ಗ್ರಾಮಗಳ ಸಂತ್ರಸ್ತರಿಗೆ ನಿವೇಶನಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ಬೆಳೆಗಳ ಸಮೀಕ್ಷೆ ಮಾಡಿ ಕೂಡಲೇ ರೈತರಿಗೆ ಪರಿಹಾರ ವಿತರಿಸಬೇಕು. ರಸ್ತೆಗಳ ಸುಧಾರಣೆಗೆ ಅನುದಾನ ಬಿಡುಗಡೆಯಾಗಿದೆ. ಕೂಡಲೇ ದುರಸ್ತಿ ಕಾಮಗಾರಿ ನಡೆಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಪ್ರವಾಹ ಹಾಗೂ ನಿರಂತರ ಮಳೆಯಿಂದ ಶಾಲಾ ಕಟ್ಟಡಗಳು, ಅಂಗನವಾಡಿ ಕಟ್ಟಡಗಳು ಹಾಗೂ ಇತರೆ ಕಟ್ಟಡಗಳಿಗೆ ಹಾನಿಯಾಗಿದೆ. ಕೂಡಲೇ ಸರ್ಕಾರಕ್ಕೆ ಮತ್ತೊಂದು ಅಂದಾಜು ಹಾನಿಯ ವಿವರ ಸಲ್ಲಿಸಬೇಕು’ ಎಂದು ಸೂಚಿಸಿದರು.

ಎಡಿಸಿ ಪ್ರಭುಲಿಂಗ ಕವಳಿಕಟ್ಟಿ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಗೋಕಾಕ ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ್‌ ಡಿ.ಜೆ. ಮಹಾತ, ತಾಲ್ಲೂಕು ಪಂಚಾಯ್ತಿ ಇಒ ಬಸವರಾಜ ಹೆಗ್ಗನಾಯಿಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.