ಬೆಳಗಾವಿ: ದಕ್ಷಿಣ ಭಾರತ ಪ್ರದೇಶದ ಜನರಲ್ ಆಫೀಸರ್ ಕಮಾಂಡಿಂಗ್, ಪಿವಿಎಸ್ಎಂ, ಎವಿಎಸ್ಎಂ ಲೆಫ್ಟಿನೆಂಟ್ ಜನರಲ್ ಕೆ.ಎಸ್.ಬ್ರಾರ್ ಅವರು ಬುಧವಾರ ಇಲ್ಲಿನ ಮರಾಠಾ ಲಘು ಪದಾತಿ ದಳದ ರೆಜಿಮೆಂಟಲ್ ಕೇಂದ್ರಕ್ಕೆ ಭೇಟಿ ನೀಡಿದರು.
ರೆಜಿಮೆಂಟಲ್ ಕೇಂದ್ರದ ಕಾರ್ಯಾಚರಣೆಯ ಸಿದ್ಧತೆ ಮತ್ತು ತರಬೇತಿ ಮಾನದಂಡಗಳನ್ನು ಪರಿಶೀಲಿಸಿದ ಅವರು, ತರಬೇತಿ ಮತ್ತು ಆಡಳಿತಾತ್ಮಕ ಮೂಲಸೌಕರ್ಯವನ್ನು ಹೆಚ್ಚಿಸುವಲ್ಲಿ, ವಿಶೇಷವಾಗಿ ಅಗ್ನಿವೀರ್ ತರಬೇತಿಯ ಸಂದರ್ಭದಲ್ಲಿ ಗಣನೀಯ ಪ್ರಗತಿಯ ಬಗ್ಗೆ ಚರ್ಚಿಸಿದರು.
ರೆಜಿಮೆಂಟಲ್ ಕೇಂದ್ರದ ಶ್ರೇಷ್ಠತೆ ಹಾಗೂ ಬದ್ಧತೆ ಬಗ್ಗೆ ಶ್ಲಾಘಿಸಿದರು. ಭವಿಷ್ಯದ ಭಾರತಕ್ಕಾಗಿ ಸೈನಿಕರು ಇಲ್ಲಿಂದ ಸಿದ್ಧಗೊಳ್ಳುತ್ತಿದ್ದಾರೆ. ಯುದ್ಧಭೂಮಿಗೆ ಹೊಂದಿಕೊಳ್ಳುವಂಥ ಎಲ್ಲ ಸಾಮರ್ಥ್ಯವನ್ನೂ ಇಲ್ಲಿಂದ ಪಡೆದುಕೊಳ್ಳುತ್ತಿದ್ದಾರೆ.
ಸ್ಟೇಷನ್ ಕಮಾಂಡರ್ ಬ್ರಿಗೇಡಿಯರ್ ಜಯದೀಪ್ ಮುಖರ್ಜಿ ಅವರೊಂದಿಗೆ ವಿವಿಧ ಸ್ಟೇಷನ್ ಘಟಕ, ಆರ್ಮಿ ಪಬ್ಲಿಕ್ ಸ್ಕೂಲ್‌ಗೆ ಭೇಟಿ ನೀಡಿದರು. ಮಾಜಿ ಸೈನಿಕರ ಆರೋಗ್ಯ ಯೋಜನೆ (ಇಸಿಎಚ್‌ಎಸ್) ಪಾಲಿಕ್ಲಿನಿಕ್‌ಗೆ ಭೇಟಿ ನೀಡಿ ನಿವೃತ್ತ ಸೈನಿಕರೊಂದಿಗೆ ಸಂವಹನ ನಡೆಸಿದರು. ಅವರ ಅಮೂಲ್ಯ ಸೇವೆಯನ್ನು ಶ್ಲಾಘಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.