ADVERTISEMENT

ಉದಗಟ್ಟಿ: ‘ಹಸಿರು ಚಪ್ಪರ’ದಲ್ಲಿ ಕಂಗೊಳಿಸುವ ಶಾಲೆ

ಪಾಠ, ಪರಿಸರ ಪ್ರಜ್ಞೆಯಲ್ಲೂ ಮುಂದಿದೆ

ಬಾಲಶೇಖರ ಬಂದಿ
Published 6 ಡಿಸೆಂಬರ್ 2019, 19:30 IST
Last Updated 6 ಡಿಸೆಂಬರ್ 2019, 19:30 IST
ಉದಗಟ್ಟಿಯ ನಾಗಲಿಂಗ ನಗರದ ಕಲ್ಲೋಳಿತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳೊಂದಿಗೆ ಶಿಕ್ಷಕರು
ಉದಗಟ್ಟಿಯ ನಾಗಲಿಂಗ ನಗರದ ಕಲ್ಲೋಳಿತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳೊಂದಿಗೆ ಶಿಕ್ಷಕರು   

ಮೂಡಲಗಿ: ಮೂಡಲಗಿ ಶೈಕ್ಷಣಿಕ ವಲಯದ ಉದಗಟ್ಟಿಯ ನಾಗಲಿಂಗ ನಗರದ ಕಲ್ಲೋಳಿ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣ ಪ್ರವೇಶಿಸುತ್ತಿದ್ದಂತೆಯೇ ‘ಹಸಿರು ಚಪ್ಪರ’ ಮುದ ನೀಡುತ್ತದೆ.

ಬಾದಾಮಿ, ಬೇವು, ಅರಳಿ, ಚೆರ್ರಿ, ಪಪ್ಪಾಯಿ, ಪಾಮ್ ಹೀಗೆ... ವೈವಿಧ್ಯಮಯವಾದ 200ಕ್ಕೂ ಹೆಚ್ಚಿನ ಗಿಡಗಳ ಸಾಲು ಕಣ್ಮನ ಸೆಳೆಯುತ್ತದೆ. ಪರಿಸರ ಕಾಳಜಿ ಸಾರುವ ಫಲಕಗಳು, ಸಾಲುಮರದ ತಿಮ್ಮಕ್ಕ, ಪಕ್ಷಿಪ್ರೇಮಿ ಸಲೀಂ ಅಲಿ ಕಟೌಟ್‌ಗಳನ್ನು ಗಿಡಗಳ ಮಧ್ಯದಲ್ಲಿ ಹಾಕಿರುವುದು ಗಮನಸೆಳೆಯುತ್ತದೆ. ಪಕ್ಷಿಗಳಿಗೆ ಕುಡಿಯಲು ನೀರು, ತಿನ್ನಲು ಕಾಳಿನ ವ್ಯವಸ್ಥೆ ಮಾಡಲಾಗಿದೆ. ಕಟ್ಟಡದ ಮುಂದೆ ಸರಸ್ವತಿ, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ಸರ್ವಪಲ್ಲಿ ರಾಧಾಕೃಷ್ಣನ್ ಮೂರ್ತಿಗಳು ಆವರಣದ ಮೆರುಗು ಹೆಚ್ಚಿಸಿವೆ. ಗೋಡೆಗಳ ಮೇಲಿರುವ ಚಿತ್ರಗಳು ನಾಡಿನ ಪರಂಪರೆ ಬಿಂಬಿಸುತ್ತವೆ.

ರೈತರು, ಕೃಷಿ ಕೂಲಿ ಕಾರ್ಮಿಕರೇ ಹೆಚ್ಚಿರುವ ಪ್ರದೇಶವಿದು. 2010ರಲ್ಲಿ ಪುಟ್ಟ ಗುಡಿಸಲಿನಲ್ಲಿ ಬೆರಳೆಣಿಕೆ ಮಕ್ಕಳೊಂದಿಗೆ ಶಾಲೆ ಪ್ರಾರಂಭಗೊಂಡಿತು. ಕೆಲವು ದಿನಗಳ ನಂತರ ಹಡಗಿನಾಳದ ಶಿಕ್ಷಣ ಪ್ರೇಮಿ ಮುತ್ತೆಪ್ಪ ಕಲ್ಲೋಳಿ ಅವರು ನೀಡಿದ 10 ಗುಂಟೆ ಭೂಮಿಯಲ್ಲಿ ಇಲಾಖೆಯು 3 ಕೊಠಡಿಗಳನ್ನು ನಿರ್ಮಿಸಿಕೊಟ್ಟಿದ್ದರಿಂದಾಗಿ ಇಲ್ಲಿನ ಮಕ್ಕಳ ಕಲಿಕೆಗೊಂದು ಶಾಶ್ವತ ನೆಲೆಯಾಯಿತು.

ADVERTISEMENT

2012ರಿಂದ:2012ರಲ್ಲಿ ಮುಖ್ಯಶಿಕ್ಷಕರಾಗಿ ಬಂದ ಶಾಂತಗೌಡ ಬಿ. ಚೌದರಿ ಅವರು ಗ್ರಾಮಸ್ಥರು ಮತ್ತು ಸಹ ಶಿಕ್ಷಕರೊಂದಿಗೆ ‘ಪರಿಸರ ಶಾಲೆ’ಯನ್ನಾಗಿಸಿ ಗಮನಸೆಳೆದಿದ್ದಾರೆ. 1ರಿಂದ 5ನೇ ತರಗತಿಯವರೆಗೆ ಬಾಲಕ, ಬಾಲಕಿಯರು ಕಲಿಯುತ್ತಿದ್ದು, ಪ್ರತಿ ವರ್ಷ 60ರಿಂದ 70 ಮಕ್ಕಳ ದಾಖಲಾತಿ ಇದೆ. ‘ನಲಿ-ಕಲಿ’ಗೆ ಸುಸಜ್ಜಿತ ಕೊಠಡಿ ಇದೆ. ಅಡುಗೆ ಕೋಣೆ ಮತ್ತು ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳಿವೆ. ಪಂಚಾಯಿತಿ ಕೊಳವೆಬಾವಿ ತೆಗೆಸಿಕೊಟ್ಟಿದೆ.

ಮಕ್ಕಳೆಲ್ಲ ಯೊಗಪಟುಗಳಾಗಿದ್ದಾರೆ. ಯೋಗ ಪ್ರದರ್ಶನದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಜನಪದ ನೃತ್ಯ, ಇಂಗ್ಲಿಷ್ ಭಾಷಣ, ಕಥೆ ಹೇಳುವುದು ಹೀಗೆ ಪ್ರತಿಭಾ ಕಾರಂಜಿಯಲ್ಲಿ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ.

ಪ್ರತಿ ವರ್ಷ ಸರಾಸರಿ 6 ಮಕ್ಕಳು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಯಾಗುತ್ತಿದ್ದು, ಅದಕ್ಕಾಗಿ ವಿಶೇಷ ತರಬೇತಿ ನೀಡಲಾಗುತ್ತದೆ ಎಂದು ಮುಖ್ಯಶಿಕ್ಷಕ ಚೌದರಿ ಹೇಳುತ್ತಾರೆ. ಈ ಪರೀಕ್ಷೆಗೆ ಸಂಬಂಧಿಸಿದ ‘ಆದರ್ಶ ಮಿತ್ರ’ ಮಾರ್ಗದರ್ಶಿ ಪುಸ್ತಕವನ್ನು ಸಹ ಶಿಕ್ಷಕರು ರೂಪಿಸಿದ್ದಾರೆ.

ಔಷಧಿ ಸಸ್ಯಗಳು:100ಕ್ಕೂ ಅಧಿಕ ಔಷಧಿ ಸಸ್ಯಗಳನ್ನು ಬೆಳೆದಿದ್ದಾರೆ. ಬಿಸಿಯೂಟ ಅಡುಗೆಗೆ ಬೇಕಾಗುವ ಕರಿಬೇವು, ಟೊಮೆಟೊ, ನುಗ್ಗೆ ಮತ್ತು ಸೊಪ್ಪುಗಳನ್ನು ಬೆಳೆದಿದ್ದಾರೆ. ಕಾಂಪೋಸ್ಟ್ ಗುಂಡಿ ಮಾಡಿದ್ದು, ಗಿಡಗಳಿಂದ ಉದುರುವ ಎಲೆಗಳನ್ನು ಹಾಕಿ ಅಲ್ಲಿ ಸಾವಯವ ಗೊಬ್ಬರ ಮಾಡಿ ಅದನ್ನು ಸಸಿಗಳಿಗೆ ಹಾಕುತ್ತಾರೆ. ಅಂತರ್ಜಲ ವೃದ್ಧಿಗಾಗಿ ಪಿವಿಸಿ ಪೈಪ್ ಜೋಡಿಸಿ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಿರುವುದು ಗಮನಸೆಳೆಯುತ್ತದೆ. ಮಕ್ಕಳಿಗೆ ಪಾಠ ಕಲಿಕೆಯೊಂದಿಗೆ ಪರಿಸರ ಪ್ರಜ್ಞೆ ಬೆಳೆಸಲಾಗುತ್ತಿದೆ.

ಸಮುದಾಯದ ಪ್ರೀತಿ: ಎಸ್‌ಡಿಎಂಸಿಯವರು ಮತ್ತು ಜನರು ಶಾಲೆ ಮೇಲಿಟ್ಟಿರುವ ಪ್ರೀತಿ ಅಪಾರವಾಗಿದೆ. ಜನರೇ ಸೇರಿ ₹ 65 ಸಾವಿರ ವೆಚ್ಚದಲ್ಲಿ ‘ಚಿಣ್ಣರ ಸಾಂಸ್ಕೃತಿಕ ವೇದಿಕೆ’ ನಿರ್ಮಿಸಿಕೊಟ್ಟಿದ್ದಾರೆ. ನೀರು ಸಂಗ್ರಹದ ‘ಜೀವಜಲ’ ಟ್ಯಾಂಕ್, ಸ್ಟೀಲ್ ಡೆಸ್ಕ್‌ಗಳು, ಸ್ಟೀಲ್ ಕಪಾಟು, ಮೇಜು, ಕುರ್ಚಿಗಳು, ಧ್ವನಿವರ್ಧಕ ಕೊಡಿಸಿದ್ದಾರೆ. ಹೀಗಾಗಿ, 2018ರಲ್ಲಿ ಶಿಕ್ಷಣ ಇಲಾಖೆಯಿಂದ ‘ಉತ್ತಮ ಎಸ್‌ಡಿಎಂಸಿ’ ಪ್ರಶಸ್ತಿ ದೊರೆತಿದೆ.

‘ನಮ್ಗ ಸಾಲೀ ಅಂದರೆ ಗುಡಿ ಇದ್ದಾಂಗರ್ರೀ. ಸಾಲೀ ಸಲವಾಗಿ ಏನೇ ಹೇಳಿದ್ರೂ ಮಾಡಾಕ ಇಲ್ಲಿ ಮಂದಿ ತಯಾರ ಐತ್ರೀ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಮುರ್ಯಾಗೋಳ ಹೇಳುತ್ತಾರೆ.

ಮುಖ್ಯಶಿಕ್ಷಕರ ಸಂ‍ಪರ್ಕಕ್ಕೆ: 9880448513.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.