ADVERTISEMENT

ಮೌಂಟ್‌ ಎವರೆಸ್ಟ್‌ ಏರಲು ಬೇಕಿದೆ ನೆರವು

7,075 ಮೀಟರ್‌ ಎತ್ತರದ ಸತೋಪಂತ್‌ ಪರ್ವತ ಏರಿ ಅರ್ಹತೆ ಪಡೆದ ಬೆಳಗಾವಿಯ ಯುವಕ

ಸಂತೋಷ ಈ.ಚಿನಗುಡಿ
Published 29 ಜುಲೈ 2023, 4:48 IST
Last Updated 29 ಜುಲೈ 2023, 4:48 IST
ಉತ್ತರಾಖಂಡನ ಸತೋಪಂತ್‌ ಹಿಮಪರ್ವತ ಏರಿದ ಬೆಳಗಾವಿಯ ಅಕ್ಷಯ್‌ ದೇಶಪಾಂಡೆ
ಉತ್ತರಾಖಂಡನ ಸತೋಪಂತ್‌ ಹಿಮಪರ್ವತ ಏರಿದ ಬೆಳಗಾವಿಯ ಅಕ್ಷಯ್‌ ದೇಶಪಾಂಡೆ   

ಬೆಳಗಾವಿ: ಜಗತ್ತಿನ ಅತ್ಯಂತ ಎತ್ತರದ ಮೌಂಟ್‌ ಎವರೆಸ್ಟ್ ಏರಲು ಬೆಳಗಾವಿಯ ಅಕ್ಷಯ್‌ ದೇಶಪಾಂಡೆ. ಮುಗಿಲೆತ್ತರಕ್ಕೆ ಏರಲು ಹಂಬಲಿಸುತ್ತಿರುವ ಈ ಪರ್ವತಾರೋಹಿಗೆ ಆರ್ಥಿಕ ಮುಗ್ಗಟ್ಟು ತಲೆದೋರಿದೆ.

8,848 ಮೀಟರ್‌ ಎತ್ತರದ ಮೌಂಟ್‌ ಎವರೆಸ್ಟ್‌ ಜಗತ್ತಿನ ಅತ್ಯಂತ ಎತ್ತರದ ಶಿಖರ. ಇದನ್ನು ಏರುವ ಮುನ್ನ 7,075 ಮೀಟರ್‌ ಎತ್ತರದ ಸತೋಪಂತ್‌ ಪರ್ವತ ಏರಿ ಅರ್ಹತೆ ಪಡೆಯಬೇಕು. ಉತ್ತರಾಖಂಡದ ಘರವಾಲ್‌ ಹಿಮಾಲಯ ಶ್ರೇಣಿಗಳಲ್ಲಿ ಈ ಸತೋಪಂತ್‌ ಶಿಖರವಿದೆ. 2022ರ ಆಗಸ್ಟ್‌ 26ರಂದು ಈ ಪರ್ವತಾರೋಹಣ ಮಾಡಿದ ದೇಶದ ಐವರಲ್ಲಿ ಅಕ್ಷಯ್‌ ಕೂಡ ಒಬ್ಬರು. ಈ ಮೂಲಕ ಮೌಂಟ್‌ ಎವರೆಸ್ಟ್‌ ಏರುವ ಅರ್ಹತೆ ಪಡೆದ ದಕ್ಷಿಣ ಭಾರತದ ಏಕಮಾತ್ರ ವ್ಯಕ್ತಿ ಅನ್ನಿಸಿಕೊಂಡರು.

ಅಕ್ಷಯ್‌ ಮಧ್ಯಮ ವರ್ಗದ ಕುಟುಂಬದವರು. ತಂದೆ ಅಶೋಕ ಅವರು ನಡೆಸುತ್ತಿದ್ದ ಗುಡಿ ಕೈಗಾರಿಕೆ ಕೂಡ ಬಂದ್‌ ಆಗಿದೆ. ಅಕ್ಷಯ್‌ ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕುಟುಂಬ ನಿರ್ವಹಣೆಗೆ ಕಷ್ಟಪಡುತ್ತಿರುವ ಅವರಿಗೆ ಮೌಂಟ್‌ ಎವರೆಸ್ಟ್‌ ಏರಲು ಆರ್ಥಿಕ ಮುಗ್ಗಟ್ಟು ಅಡ್ಡಿಯಾಗಿದೆ.

ADVERTISEMENT

ಇದೇ ಕಾರಣಕ್ಕೆ 2023ರ ತಂಡದಲ್ಲೇ ಪರ್ವತಾರೋಹಣ ಮಾಡುವ ಕನಸು ಈಡೇರಲಿಲ್ಲ. ಮುಂದಿನ ವರ್ಷವಾದರೂ ಗುರಿ ಮುಟ್ಟಬೇಕು ಎಂಬ ಛಲ ಅವರದು. ಇದಕ್ಕೆ ಕನಿಷ್ಠ ₹ 45 ಲಕ್ಷ ವೆಚ್ಚ ತಗಲುತ್ತದೆ. ಹೀಗಾಗಿ, ಪ್ರಾಯೋಜಕರಿಗಾಗಿ ಹುಡುಕಾಡುತ್ತಿದ್ದಾರೆ. ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವ ‘ಸಾಹಸ’ಕ್ಕೂ ಕೈ ಹಾಕಿದ್ದಾರೆ.

ಮೌಂಟ್‌ ಶಿಖರ ತುದಿ ಮುಟ್ಟಿದ ಕರ್ನಾಟಕದ ಎರಡನೇ ಸಾಧಕ (ಮೊದಲನೇಯವರು ಸುನಿಲ್‌) ಆಗಬೇಕೆಂಬ ಕನಸು ಅಕ್ಷಯ್‌ ಅವರದು. ಅದಕ್ಕೆ ಬೇಕಾದ ಎಲ್ಲ ಆರ್ಹತೆ ಗಳಿಸಿದ್ದಾರೆ ಅವರು. ಹಣಕಾಸಿಗಾಗಿ ಮಾತ್ರ ಕಾಯುತ್ತಿದ್ದಾರೆ.

‘ಹಿಮಪರ್ತದ ಪ್ರದೇಶದಲ್ಲಿ ಮೈನಸ್‌ 10ರಿಂದ ಮೈನ್‌ 30 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಇರುತ್ತದೆ. ಕನಿಷ್ಠ 28 ಕೆ.ಜಿ ಭಾರದ ಸಾಮಗ್ರಿ ಹೊತ್ತು ಗಗನಾಭಿಮುಖಿ ಆಗಿ ಸಂಚರಿಸಬೇಕು. 45ರಿಂದ 60 ದಿನಗಳ ಈ ಪ್ರಯಾಣದಲ್ಲಿ ರಕ್ತ ಹೆಪ್ಪುಗಟ್ಟುತ್ತದೆ. ಕಬ್ಬಿಣದ ಮುಳ್ಳುಗಳಿರುವ ಬೂಟುಗಳು, ಟೆಕ್ನಿಕಲ್‌ ಗೇರ್‌ಗಳು, ಬಟ್ಟೆ, ಆಕ್ಸಿಜನ್‌ ಸಿಲಿಂಡರ್‌ ಹೊತ್ತು ಸಾಗಬೇಕು. ನಮ್ಮೊಂದಿಗೆ ಒಬ್ಬ ಮಾರ್ಗದರ್ಶಿ, ಒಬ್ಬ ಅಡುಗೆಯವರು ಇರುತ್ತಾರೆ. 7,000 ಮೀಟರ್‌ ಏರಿದ ನಂತರ ಅವರೂ ಇರುವುದಿಲ್ಲ. ನಮ್ಮನ್ನು ನಾವೇ ನಡೆಸುವ, ರಕ್ಷಿಸುವ ಹೊಣೆ ಹೊತ್ತು ಸಾಗಬೇಕು. ಅದೊಂದು ರೋಮಾಂಚಕ ಅನುಭವ’ ಎನ್ನುತ್ತಾರೆ ಅಕ್ಷಯ್‌.

ಅವರಿಗೆ ನೆರವಾಗುವವರು 8867540604 ಸಂಪರ್ಕಿಸಬಹುದು.

ಉತ್ತರಾಖಂಡನ ಸತೋಪಂತ್‌ ಹಿಮಪರ್ವತ ಏರಿದ ಬೆಳಗಾವಿಯ ಅಕ್ಷಯ್‌ ದೇಶಪಾಂಡೆ ಸೆಲ್ಫಿ ಸಂಭ್ರಮ
ಉತ್ತರಾಖಂಡನ ಸತೋಪಂತ್‌ ಹಿಮಪರ್ವತದ ಮೇಲೆ ಬೆಳಗಾವಿಯ ಅಕ್ಷಯ್‌ ದೇಶಪಾಂಡೆ
ಉತ್ತರಾಖಂಡನ ಸತೋಪಂತ್‌ ಹಿಮಪರ್ವತ ಏರಿದ ಪರ್ವತಾರೋಹಿಗಳ ತಂಡದಲ್ಲಿ ಬೆಳಗಾವಿಯ ಅಕ್ಷಯ್‌ ದೇಶಪಾಂಡೆ

ದಾಖಲೆ ನಿರ್ಮಿಸುವ ಗುರಿ ಹಿಮಾಲಯ ಪರ್ವತಶ್ರೇಣಿಗಳಲ್ಲಿ ಅಕ್ಕಪಕ್ಕದಲ್ಲೇ ಇರುವ ಮೌಂಟ್‌ ಎವರೆಸ್ಟ್ (8848 ಮೀಟರ್‌) ಹಾಗೂ ಲೋತ್ಸೆ ಪರ್ವತ (8516 ಮೀಟರ್‌) ಎರಡನ್ನೂ ಏಕಕಾಲಕ್ಕೆ ಏರಿ ರಾಷ್ಟ್ರೀಯ ದಾಖಲೆ ಮಾಡಬೇಕು ಎಂಬುದು ಅಕ್ಷಯ್‌ ಗುರಿ. ಮೌಂಟ್‌ ಶಿಖರ ಏರಿದ ಮೇಲೆ ಮತ್ತೆ 1000 ಮೀಟರ್‌ ಕೆಳಗಿಳಿದು ಲೋತ್ಸೆ ಕಡೆಗೆ ಪ್ರಯಾಣ ಬೆಳೆಸಿ ಮತ್ತೆ 700 ಮೀಟರ್ ಏರಬೇಕು. ಈ ಎರಡೂ ಪರ್ವತಗಳ ಮಧ್ಯದ ಅಂತರವನ್ನು ಕಡಿಮೆ ಅವಧಿಯಲ್ಲಿ ಕ್ರಮಿಸಿ ದಾಖಲೆ ನಿರ್ಮಿಸುವುದು ಅಕ್ಷಯ್‌ ಗುರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.