ADVERTISEMENT

ಬೆಳಗಾವಿ: ಜನರಿಗೆ ಸ್ಪಂದಿಸಲು ಸಂಸದೆ ಮಂಗಲಾ ಅಂಗಡಿ ತಾಕೀತು

ಕೋವಿಡ್ ವಾರ್‌ ರೂಂಗೆ ಭೇಟಿ ನೀಡಿದ ಸಂಸದೆ

​ಪ್ರಜಾವಾಣಿ ವಾರ್ತೆ
Published 8 ಮೇ 2021, 12:21 IST
Last Updated 8 ಮೇ 2021, 12:21 IST
ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿರುವ ‘ಕೋವಿಡ್ 19 ವಾರ್ ರೂಂ’ಗೆ ಸಂಸದೆ ಮಂಗಲಾ ಸುರೇಶ ಅಂಗಡಿ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ಅನಿಲ ಬೆನಕೆ ಇದ್ದಾರೆ
ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿರುವ ‘ಕೋವಿಡ್ 19 ವಾರ್ ರೂಂ’ಗೆ ಸಂಸದೆ ಮಂಗಲಾ ಸುರೇಶ ಅಂಗಡಿ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ಅನಿಲ ಬೆನಕೆ ಇದ್ದಾರೆ   

ಬೆಳಗಾವಿ: ಸಂಸದೆ ಮಂಗಲಾ ಸುರೇಶ ಅಂಗಡಿ ಅವರು ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿರುವ ‘ಜಿಲ್ಲಾ ಕೋವಿಡ್ 19 ವಾರ್ ರೂಂ’ಗೆ ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಲ್ಲಿನ ಕಾರ್ಯಚಟುವಟಿಕೆಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಿದರು.

‘ಇಲ್ಲಿ ನೀಡಲಾಗಿರುವ ಹಲವು ಸಹಾಯವಾಣಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಜಿಲ್ಲೆಯ ಜನರು ಮಾಹಿತಿ ಹಾಗೂ ಸಹಾಯಕ್ಕಾಗಿ ಪರದಾಡುವಂತಾಗಿದೆ. ಇದು ಸರಿಯಲ್ಲ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು’ ಎಂದು ಸೂಚಿಸಿದರು.

‘ಕೋವಿಡ್ ಸಹಾಯವಾಣಿ ಸಂಖ್ಯೆಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ತಕ್ಷಣ ಹಾಗೂ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕಾರಣಕ್ಕೂ ಮೊಬೈಲ್ ಫೋನ್‌ಗಳನ್ನು ಸ್ವಿಚ್ಆಫ್‌ ಮಾಡಿಕೊಳ್ಳಬಾರದು. ಆ ರೀತಿ ಕಂಡುಬಂದಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಜಿಲ್ಲೆಯಲ್ಲಿ ಈವರೆಗೆ ವೈದ್ಯಕೀಯ ಆಮ್ಲಜನಕ ಕೊರತೆ ಕಂಡುಬಂದಿಲ್ಲ. ಮುಂದೆಯೂ ಕೊರತೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಸದ್ಯದ ಮಾಹಿತಿಯಂತೆ ರೆಮ್‌ಡಿಸಿವರ್ ಕೊರತೆ ಇದ್ದು, ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರಿಗೆ ತಿಳಿಸಲಾಗಿದೆ’ ಎಂದು ಹೇಳಿದರು.

ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ, ನೋಡಲ್ ಅಧಿಕಾರಿ ಶಾರದಾ ಕೋಲಕಾರ, ಆರೋಗ್ಯ ಇಲಾಖೆ ಅಧಿಕಾರಿ ಡಾ.ಎಂ.ಎಸ್. ಪಲ್ಲೇದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.