ADVERTISEMENT

ಬೆಳಗಾವಿ: ಪ್ರತಿಭಟನೆಗಷ್ಟೆ ಸೀಮಿತವಾದ ಬಂದ್

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 10:52 IST
Last Updated 28 ಸೆಪ್ಟೆಂಬರ್ 2020, 10:52 IST
ಬೆಳಗಾವಿಯ ಮಾರುಕಟ್ಟೆ ಪ್ರದೇಶದಲ್ಲಿ ಸೋಮವಾರ ‘ಕರ್ನಾಟಕ ಬಂದ್‌’ಗೆ ಸ್ಪಂದನೆ ಸಿಗಲಿಲ್ಲಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿಯ ಮಾರುಕಟ್ಟೆ ಪ್ರದೇಶದಲ್ಲಿ ಸೋಮವಾರ ‘ಕರ್ನಾಟಕ ಬಂದ್‌’ಗೆ ಸ್ಪಂದನೆ ಸಿಗಲಿಲ್ಲಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಹಾಗೂ ಎಪಿಎಂಸಿಗೆ ಸಂಬಂಧಿಸಿದಂತೆ ಹೊರಡಿಸಿರುವ ತಿದ್ದುಪಡಿ ಮಸೂದೆಗಳನ್ನು ಖಂಡಿಸಿ ರೈತ, ಕಾರ್ಮಿಕ, ಕನ್ನಡಪರ, ದಲಿತ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ ಇಲ್ಲಿ ಪ್ರತಿಭಟನೆಗಷ್ಟೆ ಸೀಮಿತವಾಯಿತು.

ಜಿಲ್ಲಾ, ತಾಲ್ಲೂಕು ಹಾಗೂ ಪಟ್ಟಣಗಳ ಕೇಂದ್ರಗಳಲ್ಲಿ ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ರೈತ ವಿರೋಧಿ ನೀತಿಯನ್ನು ತಕ್ಷಣ ಕೈಬಿಡುವಂತೆ ಆಗ್ರಹಿಸಿದರು. ಅಲ್ಲಲ್ಲಿ ಹೆದ್ದಾರಿ ತಡೆದು ಪ್ರತಿಭಟಿಸಿದ ಘಟನೆಗಳು ನಡೆದಿವೆ.

ಸರ್ಕಾರಿ ಕಚೇರಿಗಳು, ಅಂಗಡಿಗಳು ಹಾಗೂ ವಾಣಿಜ್ಯ ಕೇಂದ್ರಗಳು ಎಂದಿನಂತೆ ತೆರೆದಿದ್ದವು. ಪೊಲೀಸ್ ಭದ್ರತೆಯಲ್ಲಿ ಸಾರಿಗೆ ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ, ಆ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಹೀಗಾಗಿ, ವೃತ್ತ ಸಂಪರ್ಕಿಸುವ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಡಾ.ಬಿ.ಆರ್. ಅಂಬೇಡ್ಕರ್‌ ರಸ್ತೆಯಲ್ಲಿನ ಅಂಗಡಿಗಳು ಮಧ್ಯಾಹ್ನದವರೆಗೆ ಮುಚ್ಚಿದ್ದವು. ಪ್ರತಿಭಟನೆ ಮುಗಿದ ನಂತರ ಸಂಚಾರ ಎಂದಿನಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.