ADVERTISEMENT

ಧಾರವಾಡ ಯೋಜನೆಗೆ ಅನುಮತಿ ನಿರಾಕರಿಸಲು ಒತ್ತಾಯ

399 ಹಳ್ಳಿಗಳಿಗೆ ನೀರು ಪೂರೈಕೆ;

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 10:37 IST
Last Updated 23 ಫೆಬ್ರುವರಿ 2020, 10:37 IST
ಬೆಳಗಾವಯಲ್ಲಿ ಶನಿವಾರ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ  ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು
ಬೆಳಗಾವಯಲ್ಲಿ ಶನಿವಾರ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ  ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು   

ಬೆಳಗಾವಿ: ಸವದತ್ತಿ ಬಳಿಯ ನವಿಲುತೀರ್ಥ ಜಲಾಶಯದಿಂದ ಧಾರವಾಡ ಜಿಲ್ಲೆಯ 399 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆಗೆ ಅನುಮತಿ ನೀಡಬಾರದೆಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಸರ್ಕಾರವನ್ನು ಒತ್ತಾಯಿಸಿದರು.

ನಗರದಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಶನಿವಾರ ಮನವಿ ಸಲ್ಲಿಸಿದ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ, ‘ಈಗಾಗಲೇ ಹುಬ್ಬಳ್ಳಿ– ಧಾರವಾಡ ಅವಳಿ ನಗರಗಳಿಗೆ ಇಲ್ಲಿಂದಲೇ ಕುಡಿಯುವ ನೀರು ಪೂರೈಸಲಾಗುತ್ತಿದೆ. ಈಗ ಧಾರವಾಡ ಜಿಲ್ಲೆಯ ಎಲ್ಲ ಹಳ್ಳಿಗಳಿಗೂ ಇಲ್ಲಿನ ನೀರು ಪಡೆದುಕೊಂಡರೆ ಸ್ಥಳೀಯ ಜನರಿಗೆ ನೀರು ಇಲ್ಲದಂತಹ ಪರಿಸ್ಥಿತಿ ಬರಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

‘ರಾಮದುರ್ಗ, ಸವದತ್ತಿ, ಬೈಲಹೊಂಗಲ, ಬದಾಮಿ, ನರಗುಂದ ಹಾಗೂ ನವಲಗುಂದ ತಾಲ್ಲೂಕಿನ ಜನರು ತೀವ್ರ ಕುಡಿಯುವ ನೀರಿನ ಅಭಾವ ಎದುರಿಸಬೇಕಾಗುತ್ತದೆ. ಈ ಪ್ರದೇಶಗಳೆಲ್ಲ ಒಣಭೂಮಿಯಾಗಿ
ಪರಿವರ್ತನೆಗೊಳ್ಳುತ್ತವೆ. ವಾಸ್ತವವಾಗಿ ನವಿಲುತೀರ್ಥ ಜಲಾಶಯವನ್ನು ಈ ಪ್ರದೇಶಗಳಿಗಾಗಿಯೇ ನಿರ್ಮಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ನೆರೆಯ ಧಾರವಾಡ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳು ಈ ಜಲಾಶಯದಿಂದ ನೀರನ್ನು ಬೇಕಾಬಿಟ್ಟಿಯಾಗಿ ಒಯ್ಯುತ್ತಿದ್ದಾರೆ. ಇದೊಂದು ಗಂಭೀರ ವಿಷಯವಾಗಿದ್ದು, ಧಾರವಾಡ ಜಿಲ್ಲೆಯ ಪ್ರಸ್ತಾವನೆಯನ್ನು ತಿರಸ್ಕರಿಸಬೇಕು’ ಎಂದು ಅವರು ಒತ್ತಾಯಿಸಿದರು.

ಎಂ.ಜಿ. ಮಕಾನದಾರ, ಶಿವಪ್ಪ ಶಮರಂತ, ಶಂಕರ ಬಾಗೇವಾಡಿ, ಸಾಗರ ಬೋರಗಲ್ಲ, ಜೀನೇಶ ಅಪ್ಪನ್ನವರ, ವೀರೇಂದ್ರ ಗೋಬರಿ, ರೋಶನ ಶೆಟ್ಟಿ, ಸೂರಜ ಹುಳಬತ್ತೆ, ಕೆಂಪಣ್ಣ, ಶೀತಲ ಜೇಡಿ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.