ADVERTISEMENT

ಬೆಳಗಾವಿ: ‘ಪ್ರವರ್ಗ 2ಎ’ ಮೀಸಲಾತಿಗೆ ಪಂಚಮಸಾಲಿ ಸಮಾಜ ಹಕ್ಕೊತ್ತಾಯ

ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 11:51 IST
Last Updated 28 ಅಕ್ಟೋಬರ್ 2020, 11:51 IST
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಬುಧವಾರ ಉಪವಾಸ ಸತ್ಯಾಗ್ರಹ ನಡೆಸಿದ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರಿಂದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮನವಿ ಸ್ವೀಕರಿಸಿದರುಪ್ರಜಾವಾಣಿ ಚಿತ್ರ
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಬುಧವಾರ ಉಪವಾಸ ಸತ್ಯಾಗ್ರಹ ನಡೆಸಿದ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರಿಂದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮನವಿ ಸ್ವೀಕರಿಸಿದರುಪ್ರಜಾವಾಣಿ ಚಿತ್ರ   

ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರದಿಂದ ‘ಪ್ರವರ್ಗ 2ಎ’ ಮತ್ತು ಕೇಂದ್ರದಿಂದ ‘ಒಬಿಸಿ’ ಮೀಸಲಾತಿ ನೀಡುವಂತೆ ಆಗ್ರಹಿಸಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಇಲ್ಲಿನ ಸುವರ್ಣ ವಿಧಾನಸೌಧದ ಎದುರು ನಡೆಸಿದ ಉಪವಾಸ ಸತ್ಯಾಗ್ರಹದಲ್ಲಿ ಸಮಾಜದ ಸಾವಿರಾರು ಮಂದಿ ಪಾಲ್ಗೊಂಡು ಹಕ್ಕೊತ್ತಾಯ ಮಂಡಿಸಿದರು.

ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ನಡೆದ ಸತ್ಯಾಗ್ರಹದಲ್ಲಿ ವಿವಿಧ ಜಿಲ್ಲೆಗಳ ಜನರುಕೋವಿಡ್ ಭೀತಿಯ ನಡುವೆಯೂ ಭಾಗವಹಿಸಿ, ಶಕ್ತಿ ಪ್ರದರ್ಶಿಸಿದರು. ‘ಒಬ್ಬ ಪಂಚಮಸಾಲಿ ಪಂಚ ಲಕ್ಷ ಪಂಚಮಸಾಲಿ’ ಎಂಬ ಘೋಷಣೆ ಮೊಳಗಿತು. ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಕೂಡ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.

‘ನಾವು ನಮಗಾಗಿ ಹೋರಾಡುತ್ತಿಲ್ಲ. ಸಮಾಜದ ಮಕ್ಕಳ ಭವಿಷ್ಯಕ್ಕಾಗಿ ಹಕ್ಕೊತ್ತಾಯ ಮಂಡಿಸುತ್ತಿದ್ದೇವೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಕೆಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಸ್ವಾಮೀಜಿ ಒತ್ತಾಯಿಸಿದರು.

ADVERTISEMENT

‘ಪಂಚಮಸಾಲಿ ಸಮಾಜ ನ್ಯಾಯಯುತ ಬೇಡಿಕೆ ಮುಂದಿಟ್ಟು ಹೋರಾಟ ನಡೆಸುತ್ತಿದ್ದು, ಅವರಿಗೆ ಬೆಂಬಲ ನೀಡಬೇಕು ಎಂದು ಮಂಗಳವಾರ ರಾತ್ರಿ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಸಮನ್ವಯ ಸಮಿತಿ ಸಭೆಯಲ್ಲಿ ವರಿಷ್ಠರು ಸೂಚಿಸಿದ್ದಾರೆ. ಇದರಿಂದ ನಮ್ಮ ಹೋರಾಟಕ್ಕೆ ಹೆಚ್ಚಿನ ಬಲ ಬಂದಂತಾಗಿದೆ. ಮೀಸಲಾತಿಗಾಗಿ 20 ವರ್ಷಗಳಿಂದ ‌ಹೋರಾಡುತ್ತಲೇ ಬಂದಿದ್ದೇವೆ. ಸಹೋದರ ಸಮಾಜಗಳು ಸಂಘಟಿತರಾಗಿ ಸಾಮಾಜಿಕ ನ್ಯಾಯ ಪಡೆದಿವೆ. ಸರ್ಕಾರದ ಮೇಲೆ ಒತ್ತಡ ಹಾಕಿ ಮೀಸಲಾತಿ ಪಡೆದಿವೆ. ಹೀಗಾಗಿ, ನಾವೂ ಹೋರಾಟದ ಹಾದಿ ತುಳಿಯಬೇಕಾಯಿತು’ ಎಂದು ತಿಳಿಸಿದರು.

‘ಸಮಾಜದವರು ಒಕ್ಕಲುತನವನ್ನಷ್ಟೇ ನಂಬಿ ಕುಳಿತರೆ ಮುಂದೆ ಬರಲಾಗುವುದಿಲ್ಲ. ಹೀಗಾಗಿ ಮೀಸಲಾತಿ ಅವಶ್ಯ. ಭಿಕ್ಷೆ ಕೇಳುತ್ತಿಲ್ಲ; ನಮ್ಮ ಬೆವರಿನ ಪಾಲು ಕೇಳುತ್ತಿದ್ದೇವೆ. ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗಲೇ ನಮಗೆ ಹಕ್ಕು ಸಿಗಬೇಕು. ಇದಕ್ಕಾಗಿ ಹೋರಾಟ ಮುಂದುವರಿಸುತ್ತೇವೆ’ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ವಿಧಾನಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ, ಮುರುಗೇಶ ನಿರಾಣಿ, ಅಭಯ ಪಾಟೀಲ, ಅನಿಲ ಬೆನಕೆ, ಕಾಂಗ್ರೆಸ್ ಮುಖಂಡ ವಿನಯ ಕುಲಲರ್ಣಿ ಪಾಲ್ಗೊಂಡಿದ್ದರು.

***

ಅಂಬೇಡ್ಕರ್‌ ಫೋಟೊ

ವೇದಿಕೆಯ ಹಿಂದಿನ ಫಲಕದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಫೋಟೊ ಬಳಸಿದ್ದು ವಿಶೇಷವಾಗಿತ್ತು.

‘ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ನಮಗೆ ಮೀಸಲಾತಿಯ ಅವಕಾಶ ಕಲ್ಪಿಸಿದ್ದಾರೆ. ಹೀಗಾಗಿ, ಅವರ ಫೋಟೊ ಹಾಕಿದ್ದೇವೆ. ಹಕ್ಕು ಪಡೆಯಲು ಶಾಂತಿಯುತ ಮಾರ್ಗದಲ್ಲಿ ಹೋರಾಡುತ್ತಿದ್ದೇವೆ’ ಎಂದು ಸ್ವಾಮೀಜಿ ಪ್ರತಿಕ್ರಿಯಿಸಿದರು.

***

‘ಕಿಂಗ್ ಆಗಲು ಅವಕಾಶವಿದ್ದರೂ ಕಿಂಗ್ ಮೇಕರ್ ಆದರು’

‘ನಮ್ಮ ಸಮಾಜದ ಬಿ.ಎಸ್. ಯಡಿಯೂರಪ್ಪ ಅವರು ಈ ಬಾರಿ ಮುಖ್ಯಮಂತ್ರಿಯಾಗಲು ರಮೇಶ ಜಾರಕಿಹೊಳಿ ದೊಡ್ಡ ಕೊಡುಗೆ ನೀಡಿದ್ದಾರೆ. ಅವರಿಗೆ ಕಿಂಗ್ ಆಗಲು ಅವಕಾಶವಿತ್ತು. ಆದರೆ, ಅವರು ಕಿಂಗ್ ಮೇಕರ್ ಆಗಿದ್ದಾರೆ. ಇದನ್ನು ಅವರ ಪಕ್ಷದವರೂ ಒಪ್ಪುತ್ತಾರೆ’ ಎಂದು ಸ್ವಾಮೀಜಿ ಹೇಳಿದರು.

ಮನವಿ ಸ್ವೀಕರಿಸಲು ಸಚಿವರು ಬಂದಿದ್ದ ವೇಳೆ ಮಾತನಾಡಿದ ಸ್ವಾಮೀಜಿ, ‘ರಮೇಶ ಅವರು ಗೋಕಾಕದಲ್ಲಿ ಸತತವಾಗಿ ಆಯ್ಕೆಯಾಗಲು ನಮ್ಮ ಸಮಾಜದವರ ಕೊಡುಗೆ ದೊಡ್ಡದಿದೆ’ ಎಂದರು.

ಸರ್ಕಾರದ ಪರವಾಗಿ ಮನವಿ ಸ್ವೀಕರಿಸಿದ ರಮೇಶ, ‘ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಆಶ್ವಾಸನೆ ನೀಡಲಾಗುತ್ತಿಲ್ಲ. ಆದರೆ, ಸಮಾಜದೊಂದಿಗೆ ನಾವು ಇದ್ದೇವೆ. ಹಕ್ಕೊತ್ತಾಯವನ್ನು ಗುರುವಾರವೇ ಮುಖ್ಯಮಂತ್ರಿ ಗಮನಕ್ಕೂ ತರುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.