ADVERTISEMENT

ಶಿವು ಉಪ್ಪಾರ ಸಾವಿಗೆ ನ್ಯಾಯ: ಆತ್ಮಹತ್ಯೆಗೆ ವ್ಯಕ್ತಿ ಯತ್ನ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 12:57 IST
Last Updated 8 ಜುಲೈ 2019, 12:57 IST

ಬೆಳಗಾವಿ: ‘ತಾಲ್ಲೂಕಿನ ಹಿರೇಬಾಗೇವಾಡಿ ಎಪಿಎಂಸಿ ಆವರಣದ ಸಾರ್ವಜನಿಕ ಶೌಚಾಲಯದಲ್ಲಿ ಈಚೆಗೆ ಅನುಮಾನಾಸ್ಪದವಾಗಿ ಸಾವಿಗೀಡಾದ ಶಿವು ಉಪ್ಪಾರ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಆತನ ಸಾವಿಗೆ ನ್ಯಾಯ ಕೊಡಿಸಬೇಕು’ ಎಂದು ಆಗ್ರಹಿಸಿ ವಿಷ ಸೇವಿಸಿದ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ರಾಯಚೂರು ಜಿಲ್ಲೆಯ ಲಿಂಗಸಗೂರು ನಿವಾಸಿ ಚಂದ್ರಶೇಖರ ಬಸಪ್ಪಗೌಡ್ರ (31) ಆತ್ಮಹತ್ಯೆಗೆ ಯತ್ನಿಸಿದವರು.

‘ಗೋರಕ್ಷಕನಾಗಿದ್ದ ಶಿವು ಉಪ್ಪಾರ ಸಾವು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ಆಗ್ರಹಿಸಿ ಶ್ರೀರಾಮ ಸೇನೆಯಿಂದ ಇಲ್ಲಿನ ಸಿಪಿಇಡಿ ಮೈದಾನದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಪಾಲ್ಗೊಂಡಿದ್ದರು. ಮುಗಿಯುತ್ತಿದ್ದಂತೆಯೇ ‌ವಿಷ ಸೇವಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಗಮನಿಸಿದ ಕಾರ್ಯಕರ್ತರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ADVERTISEMENT

‘ಈ ವ್ಯಕ್ತಿ ಶ್ರೀರಾಮ ಸೇನೆ ಸಂಘಟನೆ ಸದಸ್ಯನಲ್ಲ, ಪದಾಧಿಕಾರಿಯೂ ಅಲ್ಲ. ಲಿಂಗಸಗೂರಿನ ಸಂಘಟನೆಯ ಕಾರ್ಯಕರ್ತರೊಂದಿಗೆ ಅವರು ಬಂದಿಲ್ಲ. ಹಿಂದೂ ಪರ ಕಾರ್ಯಕರ್ತ ಸಾವಿಗೀಡಾದನೆಂದು ನೊಂದು ಭಾವನಾತ್ಮಕವಾಗಿ ಹೀಗೆ ಮಾಡಿಕೊಂಡಿದ್ದಾರೋ, ವೈಯಕ್ತಿಕ ಸಮಸ್ಯೆ ಕಾರಣವೋ ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಖಾಸಗಿ ಬ್ಯಾಂಕಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಿರುವುದಾಗಿ, ಯಾರದೋ ಮದುವೆ ಕಾರ್ಯಕ್ರಮವಿದೆ ಎಂದು ರಜೆ ಪಡೆದುಕೊಂಡು ಇಲ್ಲಿಗೆ ಬಂದಿರುವುದು ತಿಳಿದುಬಂದಿದೆ. ಗುಣಮುಖರಾದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ವ್ಯಕ್ತಿಯನ್ನು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಾಗೂ ಮುಖಂಡರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.