ADVERTISEMENT

ಬಿಟ್ ಕಾಯಿನ್: ರಾಜಕಾರಣಿಗಳೂ ಆಡಿರಬಹುದು- ಪ್ರಭಾಕರ್ ಕೋರೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 12:03 IST
Last Updated 10 ನವೆಂಬರ್ 2021, 12:03 IST
ಪ್ರಭಾಕರ್ ಕೋರೆ
ಪ್ರಭಾಕರ್ ಕೋರೆ   

ಬೆಳಗಾವಿ: ‘ಬಿಟ್ ಕಾಯಿನ್ ಮಟ್ಕಾ ಇದ್ದಂತೆ. ಅದನ್ನು ಆಡುವ ಜನರಿದ್ದಾರೆ. ಇದರಲ್ಲಿ ರಾಜಕಾರಣಿಗಳು ಇಲ್ಲವೆಂದು ಹೇಳುವುದಿಲ್ಲ. ಅವರೂ ಆಡಿರಬಹುದು’ ಎಂದು ಬಿಜೆಪಿ ಮುಖಂಡ ಹಾಗೂ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

ಇಲ್ಲಿ ಬುಧವಾರ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ರಫೇಲ್ ಯುದ್ಧ ವಿಮಾನಗಳ ಖರೀದಿ ವಿಷಯದಲ್ಲಿ ಕಾಂಗ್ರೆಸ್‌ನವರು ಬಿಜೆಪಿ ವಿರುದ್ಧ ಆರೋಪಿಸಿದ್ದರು. ನಂತರ ಏನಾಯ್ತು? ಅವರ ಪಕ್ಷದವರೇ ಅದರಲ್ಲಿ ಭಾಗಿಯಾಗಿದ್ದರು ಹಾಗೂ ಕಿಕ್‌ಬ್ಯಾಕ್ ಪಡೆದಿದ್ದಾರೆ ಎನ್ನುವುದನ್ನು ಫ್ರಾನ್ಸ್‌ನವರೇ ಹೇಳಿದರಲ್ಲಾ’ ಎಂದು ತಿರುಗೇಟು ನೀಡಿದರು.

‘ಬಿಟ್‌ ಕಾಯಿನ್ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಲೆದಂಡ ಆಗಲಿದೆ’ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ, ‘ಅಂಥದ್ದೇನೂ ಆಗುವುದಿಲ್ಲ’ ಎಂದರು.

ADVERTISEMENT

‘ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ನಂಜುಂಡಪ್ಪ ವರದಿ ಬೈಬಲ್ ಇದ್ದಂತೆ. ಇಲ್ಲಿ ಏನೇನು ಅಭಿವೃದ್ಧಿ ಆಗಬೇಕು ಎಂಬ ಬಗ್ಗೆ ವರದಿಯಲ್ಲಿ ತಿಳಿಸಿದ್ದಾರೆ. ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಪಶು ಆಸ್ಪತ್ರೆ ಎಷ್ಟು ಆಗಬೇಕು ಎಂಬ ಬಗ್ಗೆಯೂ ತಿಳಿಸಿದ್ದಾರೆ. ಹೀಗಾಗಿ ಸಂಪೂರ್ಣವಾಗಿ ಅನುಷ್ಠಾಕ್ಕೆ ಬಂದರೆ ಉತ್ತರ ಕರ್ನಾಟಕ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತದೆ’ ಎಂದರು.

‘ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಘೋಷಿಸಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ಕೊಡುವುದಾಗಿ ಹೇಳಿದ್ದಾರೆ. 2 ವರ್ಷಗಳ ಬಳಿಕ ಈ ಬಾರಿ ಸುವರ್ಣ ವಿಧಾನಸೌಧದಲ್ಲೇ ವಿಧಾನಮಂಡಲ ಅಧಿವೇಶನ ನಡೆಯಲಿದೆ’ ಎಂದು ತಿಳಿಸಿದರು.

‘ಇಲ್ಲಿ ಶಾಸಕರು ಮತ್ತು ಸಚಿವರ ಭವನ ನಿರ್ಮಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ’ ಎಂದರು.

‘ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ನಡೆಯುವ ಚುನಾವಣೆಗೆ ಜಿಲ್ಲೆಯಲ್ಲಿ ಬಿಜೆಪಿಯಿಂದ ಒಬ್ಬ ಅಭ್ಯರ್ಥಿಯನ್ನು ಮಾತ್ರ ಹಾಕುತ್ತೇವೆ. ನಾನು ಸ್ಪರ್ಧಿಸುವುದಿಲ್ಲ. ಮಹಾಂತೇಶ ಕವಟಗಿಮಠ ಸಲುವಾಗಿ ಪ್ರಯತ್ನ ಮಾಡುತ್ತೇನೆ. ಅವರಿಗೇ ಟಿಕೆಟ್ ಕೊಡಬಹುದು ಎನ್ನುವ ವಿಶ್ವಾಸವಿದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.