ADVERTISEMENT

ಶಾಲೆ, ಕಾಲೇಜುಗಳಲ್ಲಿ ತರಗತಿಗೆ ಸಿದ್ಧತೆ, ‘ವಿದ್ಯಾಗಮ’ ಕಾರ್ಯಕ್ರಮ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 13:55 IST
Last Updated 31 ಡಿಸೆಂಬರ್ 2020, 13:55 IST
ತರಗತಿಗಳ ಪುನರಾರಂಭ ಹಿನ್ನೆಲೆಯಲ್ಲಿ ಬೆಳಗಾವಿಯ ಸರ್ದಾರ್ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಮಾರ್ಕಿಂಗ್ ಕಾರ್ಯ ನಡೆಯಿತು
ತರಗತಿಗಳ ಪುನರಾರಂಭ ಹಿನ್ನೆಲೆಯಲ್ಲಿ ಬೆಳಗಾವಿಯ ಸರ್ದಾರ್ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಮಾರ್ಕಿಂಗ್ ಕಾರ್ಯ ನಡೆಯಿತು   

ಬೆಳಗಾವಿ: ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಹಾಗೂ 6ರಿಂದ 9ನೇ ತರಗತಿಗೆ ‘ವಿದ್ಯಾಗಮ’ ಕಾರ್ಯಕ್ರಮ ಜ.1ರಿಂದ ಪುನರಾರಂಭಗೊಳ್ಳುತ್ತಿದ್ದು, ಇದಕ್ಕಾಗಿ ಶಾಲೆ–ಕಾಲೇಜುಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮುನ್ನಾ ದಿನವಾದ ಗುರುವಾರ ಸ್ಯಾನಿಟೈಸ್ ಮಾಡಿ ಪೂರ್ವ ಸಿದ್ಧತೆ ನಡೆಸಲಾಯಿತು.

ವಿವಿಧ ಶಾಲೆಗಳಿಗೆ ಡಿಡಿಪಿಐ ಆನಂದ ಪುಂಡಲೀಕ ಹಾಗೂ ಬಿಇಒಗಳು ಭೇಟಿ ನೀಡಿ ತಯಾರಿಯನ್ನು ಪರಿಶೀಲಿಸಿದರು.

ADVERTISEMENT

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 2,381 ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 3,166 ಶಾಲೆಗಳಿವೆ. ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ ಒಟ್ಟು 8,93,653 ವಿದ್ಯಾರ್ಥಿಗಳಿದ್ದಾರೆ. 8,616 ಶಿಕ್ಷಕರಿದ್ದಾರೆ.

‘ಎಲ್ಲ ಶಾಲೆಗಳಲ್ಲೂ ಸ್ಯಾನಿಟೈಜೇಶನ್ ಮಾಡಲಾಗಿದೆ. ಮಕ್ಕಳ ಸುರಕ್ಷತೆಗೆ ದೃಷ್ಟಿಯಿಂದ ಸರ್ಕಾರದ ಮಾರ್ಗಸೂಚಿ ಪ್ರಕಾರ ಕ್ರಮ ವಹಿಸಲಾಗಿದೆ. ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಆಗಾಗ ಕೈತೊಳೆಯಲು ಸ್ಯಾನಿಟೈಸರ್ ಅಥವಾ ಸಾಬೂನು ವ್ಯವಸ್ಥೆ ಮಾಡಲಾಗಿದೆ. ತರಗತಿ ಕೊಠಡಿಯಲ್ಲಿ ಮಕ್ಕಳನ್ನು ಕಡಿಮೆ ಸಂಖ್ಯೆಯಲ್ಲಿ ಅಂತರದಲ್ಲಿ ಕೂರಿಸಬೇಕು. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ. ಎರಡೂವರೆ ತಾಸು ಮಾತ್ರ ಶಾಲೆಗಳು ನಡೆಯುತ್ತವೆ. ಹಾಲು ವಿತರಣೆ, ಮಧ್ಯಾಹ್ನದ ಬಿಸಿಯೂಟ ಇರುವುದಿಲ್ಲ’ ಎಂದು ಬೆಳಗಾವಿ ಡಿಡಿಪಿಐ ಆನಂದ ಪುಂಡಲೀಕ ‘ಪ್ರಜಾವಾಣಿ’ಗೆ ತಿಳಿಸಿದರು.

ಪರೀಕ್ಷೆಗೆ ಮುಗಿಬಿದ್ದರು:ಶಾಲೆ–ಕಾಲೇಜುಗಳ ಪುನರಾರಂಭದ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸುವುದಕ್ಕಾಗಿ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಗುರುವಾರ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಗಂಟಲು ದ್ರವದ ಮಾದರಿ ನೀಡಿ ಪರೀಕ್ಷೆಗೆ ಒಳಗಾದರು.

‘ಆಸ್ಪತ್ರೆಯಲ್ಲಿ ಪರೀಕ್ಷೆಗೆ ಹೆಚ್ಚುವರಿ ವ್ಯವವ್ಥೆ ಮಾಡುವ ಮೂಲಕ ಅನುಕೂಲ ಕಲ್ಪಿಸಬೇಕು. ಪರೀಕ್ಷೆಗೆಂದೇ ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸಬೇಕು. ಕಡಿಮೆ ಸಂಖ್ಯೆಯ ಸಿಬ್ಬಂದಿ ನಿಯೋಜಿಸಿರುವುದರಿಂದಾಗಿ ತೊಂದರೆಯಾಗುತ್ತಿದೆ. ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.