ಮೂಡಲಗಿ: ಮೂಡಲಗಿ ಭಾಗದ ಎಲ್ಲ ಕಡೆಯಲ್ಲಿ ಬುಧವಾರ ಬೆಳಿಗ್ಗೆ ಮೂರು ಗಂಟೆಗೆ ದಟ್ಟ ಮಳೆ ಸುರಿದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಪೂರ್ವ ಮುಂಗಾರು ಮಳೆ ಸುರಿದ ನಂತರ ವರುಣನ ಸುಳಿವು ಇಲ್ಲದೆ ಎರಡುವರೆ ತಿಂಗಳಿಂದ ರೈತಾಪಿ ಜನರು ಮಳೆಗಾಗಿ ಪರಿತಪಿಸುತ್ತಿದ್ದರು.
ಪ್ರಸಕ್ತ ಸಾಲಿನಲ್ಲಿ ಬಿತ್ತನೆ ನಂತರ ಮಳೆಗಾಗಿ ರೈತರು ಮಳೆರಾಯಣ ಆಗಮನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಬುಧವಾರ ಸುಪ್ರಭಾತದೊಂದಿಗೆ ಬಿದ್ದ ಮಳೆಯು ನೆಲವನ್ನು ತೋಯಿಸಿ ಭೂಮಿಯೆಲ್ಲ ಹಸಿಯಾಗಿಸಿದೆ. ‘ಇಂದು ಜೋರಾದ ಮಳೆಯಾಗಿದ್ದರಿಂದ ಕಬ್ಬು, ಸೋಯಾಬಿನ ಮತ್ತು ಗೋವಿನ ಜೋಳದ ಬೆಳೆಗೆ ಉತ್ತಮವಾಗಿದೆ’ ಎಂದು ಹೊಸಟ್ಟಿ ಗ್ರಾಮದ ಪ್ರಗತಿಪರ ರೈತ ರಮೇಶ ನಾಯಕ ಹರ್ಷ ವ್ಯಕ್ತಪಡಿಸಿದರು.
ತುಕ್ಕಾನಟ್ಟಿ, ಅರಭಾವಿ, ಕಲ್ಲೋಳಿ ಭಾಗದಲ್ಲಿ ಅರಿಸಿಣ, ಕಬ್ಬು, ತರಕಾರಿ ಬೆಳೆಗಳಿಗೆ ಮಳೆಯು ಉತ್ತಮವಾಗಿದೆ ಎಂದು ರೈತ ಅಶೋಕ ಗದಾಡಿ ತಿಳಿಸಿದರು. ಗುರ್ಲಾಪುರ ಭಾಗದಲ್ಲಿ ಎರಡು ತಿಂಗಳ ಹಿಂದೆ ಗೋವಿನ ಜೋಳ, ಸ್ವೀಟ್ ಕಾರ್ನ್ ಮತ್ತು ಅರಿಸಿಣ ನಾಟಿ ಮಾಡಿರುವ ರೈತರು ಮಳೆಗಾಗಿ ಕಾಯುತ್ತಿದ್ದರು, ಬುಧವಾರ ರಭಸದ ಮಳೆಯು ಉತ್ತಮ ಇಳುವರಿಯ ಭರವಸೆ ಮೂಡಿಸಿದೆ.
ಯಾದವಾಡ ಭಾಗದಲ್ಲಿ ಬೆಳೆಯುವ ಕಬ್ಬು ಉದ್ದ ಹೆಸರು ಮತ್ತು ಈರುಳ್ಳಿ ಬೆಳೆಗಳಿಗೆ ಮಳೆಯ ಅವಶ್ಯಕತೆ ಇತ್ತು. ಬುಧುವಾರ ಬೆಳಿಗ್ಗೆ ಸುರಿದ 3 ಗಂಟೆ ಮಳೆ ರೈತರಿಗೆ ಸಂತೃಪ್ತಿ ತಂದಿದೆ
-ಸೋಮು ಗುಡಿ ರೈತರು ಯಾದವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.