ADVERTISEMENT

ಬೆಳಗಾವಿ: ಮಳೆ ನಿಂತರೂ ನಿಲ್ಲದ ನೀರು...

ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ಸಪ್ತ ನದಿಗಳು, ಜಲಪಾತಗಳು, ಜಲಾಶಯಗಳ ಒಳಹರಿವು ಸಹ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 13:39 IST
Last Updated 26 ಜೂನ್ 2025, 13:39 IST
ಗೋಕಾಕ ತಾಲ್ಲೂಕಿನ ಗೊಡಚಿನಮಲ್ಕಿ ಜಲಪಾತದಲ್ಲಿ ಯುವಜನರು ನೀರು ಹರಿಯುವ ಸ್ಥಳದ ಸಮೀಪವೇ ಹೋಗಿ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿರುವ ಪ್ರವಾಸಿಗರು
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಗೋಕಾಕ ತಾಲ್ಲೂಕಿನ ಗೊಡಚಿನಮಲ್ಕಿ ಜಲಪಾತದಲ್ಲಿ ಯುವಜನರು ನೀರು ಹರಿಯುವ ಸ್ಥಳದ ಸಮೀಪವೇ ಹೋಗಿ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿರುವ ಪ್ರವಾಸಿಗರು ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ವರುಣನ ಅಬ್ಬರ ತಗ್ಗಿದೆ. ಆದರೆ, ಸಪ್ತ ನದಿಗಳಿಗೆ ಹರಿದುಬರುವ ನೀರು ನಿಂತಿಲ್ಲ. ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಮತ್ತು ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ ಜಲಾಶಯಗಳಲ್ಲಿ ಒಳಹರಿವಿನ ಪ್ರಮಾಣ ಕಡಿಮೆಯಾಗಿಲ್ಲ.

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದ ಕಾರಣ, ಕೃಷ್ಣಾ ಮತ್ತು ಅದರ ಉಪನದಿಗಳು ಮೈದುಂಬಿಕೊಂಡು ಹರಿಯುತ್ತಿವೆ.

ಬೆಳಗಾವಿ ನಗರದಲ್ಲಿ ಆಗಾಗ ತುಂತುರು ಮಳೆ ಸುರಿಯುತ್ತಿದ್ದು, ಬಸವನ ಕುಡಚಿಯಲ್ಲಿ ಒಂದು ಮರ ಬಿದ್ದಿದೆ.

ADVERTISEMENT

ಸತತ ಮಳೆಯಿಂದ ನಗರದ ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರ–ವಹಿವಾಟಿಗೆ ತೊಡಕಾಗಿತ್ತು. ಆದರೆ, ಗುರುವಾರ ಮಳೆ ಕಡಿಮೆಯಾದ ಕಾರಣ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಿತ್ತು. ಜನರು ಅಗತ್ಯ ದಿನಸಿ ವಸ್ತುಗಳನ್ನು ಸಂಗ್ರಹಿಸುತ್ತಿರುವುದು ಕಂಡುಬಂತು.

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ, ಖಾನಾಪುರ ಮತ್ತು ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಆದರೆ, ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಇವೆಲ್ಲ ಮತ್ತೆ ಆರಂಭವಾಗಲಿವೆ.

ನವಿಲುತೀರ್ಥ ಜಲಾಶಯದಲ್ಲಿ ಜೂನ್‌ 25ರಂದು 7,014 ಕ್ಯೂಸೆಕ್‌ ಒಳಹರಿವು ಇತ್ತು. ಜೂನ್‌ 26ರಂದು ಅದು 10,999 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಹಿಡಕಲ್‌ ಜಲಾಶಯದ ಒಳಹರಿವಿನ ಪ್ರಮಾಣ 26,420 ಕ್ಯೂಸೆಕ್‌ನಿಂದ 30,300 ಕ್ಯೂಸೆಕ್‌ಗೆ ಹೆಚ್ಚಿದೆ.

ಸತತ ಮಳೆಯಿಂದ ಗೋಕಾಕ ಜಲಪಾತ, ಗೊಡಚಿನಮಲ್ಕಿ ಜಲಪಾತ ಮೈದುಂಬಿಕೊಂಡು ಹರಿಯುತ್ತಿದ್ದು, ಅವುಗಳ ವೀಕ್ಷಣೆಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ.

ಆದರೆ, ಗೊಡಚಿನಮಲ್ಕಿ ಜಲಪಾತದಲ್ಲಿ ಫೋಟೊ, ಸೆಲ್ಫಿಗಾಗಿ ಯುವಜನರು ಅಪಾಯವನ್ನೂ ಲೆಕ್ಕಿಸದೆ ನೀರು ಹರಿಯುವ ಸ್ಥಳದ ಸಮೀಪವೇ ಹೋಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.