ರಾಯಬಾಗ: ‘ಮಂಜುನಾಥ ಸನ್ನಿಧಿಗೆ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರಿಗೆ ಕೆಟ್ಟ ಹೆಸರು ತರುವ ಪ್ರಯತ್ನಗಳು ನಡೆಯುತ್ತಿದೆ. ಅದಕ್ಕಾಗಿ ಸಮಾಜದವರು, ಸಮಾಜದ ವಕೀಲರು ಮುಂದೆ ಬಂದು ಅವರಿಗೆ ಬೆಂಬಲ ನೀಡಬೇಕು’ ಎಂದು ಜೈನ ಸಮುದಾಯದ 108 ಶ್ರೀ ಸಿದ್ಧಸೇನ ಮಹಾರಾಜರು ಮನವಿ ಮಾಡಿದರು.
ರಾಯಬಾಗ ತಾಲ್ಲೂಕಿನ ನಸಲಾಪುರ ಗ್ರಾಮದಲ್ಲಿ ಭಾನುವಾರ ಪಾವನ ವರ್ಷಾಯೋಗದ ನಿಮಿತ್ಯ ನಡೆದ ರಾಜ್ಯಮಟ್ಟದ ಜೈನ ವಕೀಲರ ಸಮಾವೇಶದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸ್ಟೇಟ್ ಬಾರ್ ಅಸೋಸಿಯೇಷನ್ ಸದಸ್ಯ ಆನಂದ ಮಗದುಮ್ಮ ಮಾತನಾಡಿ, ‘ಸಿದ್ಧಸೇನ ಶ್ರೀಗಳ ನೇತೃತ್ವದಲ್ಲಿ ರಾಜ್ಯಮಟ್ಟದ ಜೈನ ವಕೀಲರ ಸಮಾವೇಶ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಇತ್ತೀಚಿನ ದಿನಗಳಲ್ಲಿ ಜೈನ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಕಾಣುತ್ತಿದೆ. ಎಲ್ಲರೂ ಒಗ್ಗಟ್ಟಾಗಿ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಹಾಗೂ ಧರ್ಮಸ್ಥಳ ಸನ್ನಿಧಿಗೆ ಅವಮಾನ ಮಾಡುತ್ತಿರುವುದನ್ನು ಖಂಡಿಸಿ ಶಾಂತಿಯುತ ಹೋರಾಟ ಮಾಡೋಣ’ ಎಂದರು.
ಹಿರಿಯ ವಕೀಲ ಡಿ.ಜೆ. ಗುಂಡೆ, ಮುಖಂಡರಾದ ಭರತೇಶ ಬನವಣೆ, ಪಿ.ಎಸ್. ಉಗಾರೆ, ವಿದ್ಯಾಧರ ಪಾಟೀಲ, ಮಹಾವೀರ ಖೋಂಬಾರೆ, ರಾಜಗೌಡ ಪಾಟೀಲ, ಅಭಯ ಅಕ್ಕಿವಾಟೆ, ಸುಶಾಂತ ಚೌಗುಲೆ, ಸುನೀಲ ಜೈನ ಸೇರಿದಂತೆ ಬೆಳಗಾವಿ, ಬಿಜಾಪೂರ, ಕೊಲ್ಹಾಪುರ, ಸಾಂಗ್ಲಿ, ಧಾರವಾಡ, ಹುಬ್ಬಳ್ಳಿ, ಬೆಳಗಾವಿ ಜಿಲ್ಲೆಯ ವಕೀಲರು ಪಾಲ್ಗೊಂಡಿದ್ದರು. ಜಯಪಾಲ ಬನವಣೆ ಸ್ವಾಗತಿಸಿದರು, ಸಂಜಯ ಪಾಟೀಲ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.