ADVERTISEMENT

ಅಭಿ‍ಪ್ರಾಯ ದಾಖಲಿಸಲು ಸಾರ್ವಜನಿಕರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 12:44 IST
Last Updated 13 ಫೆಬ್ರುವರಿ 2020, 12:44 IST

ಬೆಳಗಾವಿ: ‘ನಗರದಲ್ಲಿ ‘ಸುಲಲಿತ (ನೆಮ್ಮದಿ) ಜೀವನ (ಈಸ್‌ ಆಫ್‌ ಲಿವಿಂಗ್‌)’ ಹೇಗಿದೆ ಎನ್ನುವ ಕುರಿತು ಜನರು ತಮ್ಮ ಅಭಿಪ್ರಾಯ ದಾಖಲಿಸಲು ಅನುಕೂಲವಾಗುವಂತೆ ಜಾಲತಾಣದಲ್ಲಿ ಅಗತ್ಯ ಮಾಹಿತಿ ಭರ್ತಿ ಪ್ರಕ್ರಿಯೆ ಮುಗಿದಿದೆ. ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಅಭಿಪ್ರಾಯ ನೀಡುವುದು ನಗರದ ಅಭಿವೃದ್ಧಿ ದೃಷ್ಟಿಯಿಂದ ಸಹಕಾರಿಯಾಗಲಿದೆ’ ಎಂದು ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ತಿಳಿಸಿದ್ದಾರೆ.

‘ಆನ್‌ಲೈನ್‌ನಲ್ಲಿ ನಡೆಯುವ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಫೆ.29ರವರೆಗೆ ಅವಕಾಶವಿದೆ. ಹೆಚ್ಚು ಜನರು ಭಾಗವಹಿಸಿದರೆ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಒಳ್ಳೆಯ ಸ್ಥಾನ ಸಿಗಲಿದೆ. ಹೀಗಾಗಿ, ಕಾಳಜಿ ವಹಿಸಬೇಕು’ ಎಂದು ಕೋರಿದ್ದಾರೆ.

‘ಈವರೆಗೆ 1,400 ಮಂದಿ ಮಾತ್ರ ಅಭಿ‍ಪ್ರಾಯ ದಾಲಿಸಿದ್ದಾರೆ. 10ಸಾವಿರ ಜನರಾದರೂ ಪಾಲ್ಗೊಳ್ಳಬೇಕು. ಶಿಕ್ಷಣ, ಆರೋಗ್ಯ, ಪರಿಸರ, ವಸತಿ, ಶುಚಿತ್ವ, ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಸಾರಿಗೆ, ಸುರಕ್ಷತೆ ಮೊದಲಾದ 24 ವಿವಿಧ ವಿಷಯಗಳ ಬಗ್ಗೆ ಸಾರ್ವಜನಿಕರಿಂದ ಅಭಿ‍ಪ್ರಾಯ ಸಂಗ್ರಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಯೋಜನೆ ರೂಪಿಸುವಾಗ ಈ ಅಭಿಪ್ರಾಯಗಳು ಪರಿಗಣನೆಗೆ ಬರಲಿವೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘http://eol2019.org/CitizenFeedback, ಫೇಸ್‌ಬುಕ್‌ @easeofliving2019, ಟ್ವಿಟ್ಟರ್‌ @easeofliving19, @MoHUA, @SmartCitiesMission ಮೂಲಕ ಅಭಿಪ್ರಾಯ ದಾಖಲಿಸಬಹುದು. ಕೇಂದ್ರ ಸರ್ಕಾರವು ಸೂಚ್ಯಂಕ ನಿರ್ಧಾರದಲ್ಲಿ ಈ ಜನಾಭಿ‍ಪ್ರಾಯದ ಆಧಾರದ ಮೇಲೆ ನಿಗದಿಪಡಿಸುತ್ತದೆ’ ಎಂದು ತಿಳಿಸಿದ್ದಾರೆ.

‘ಪ್ರಮುಖ ವೃತ್ತಗಳಲ್ಲಿ ಅಂಟಿಸಿರುವ ಭಿತ್ತಿಪತ್ರದಲ್ಲಿನ ‘ಕ್ಯೂ ಆರ್‌ ಕೋಡ್‌’ ಸ್ಕ್ಯಾನ್ ಮಾಡುವ ಮೂಲಕವೂ ಅಭಿಪ್ರಾಯ ಹಂಚಿಕೊಳ್ಳಬಹುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.