ಸವದತ್ತಿ: ಇಲ್ಲಿನ ಸೌಗಂಧಿಪುರದಲ್ಲಿರುವ ಸಾಯಿಮಂದಿರದ 18 ನೇ ವಾರ್ಷಿಕೋತ್ಸವದ ಅಂಗವಾಗಿ ಮಂದಿರದಲ್ಲಿ ಪುಷ್ಪಗಳಿಂದ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು.
ಮಹಾಮೃತ್ಯುಂಜಯ ಹೋಮದೊಂದಿಗೆ ಆರಂಭಗೊಂಡ ಧಾರ್ಮಿಕ ಕಾರ್ಯಕ್ರಮಗಳು ಸಾಯಿ ಬಾಬಾರರಿಗೆ ಕಾಕಡಾರತಿ, ಅಭಿಷೇಕ, ಸರ್ವಾಲಂಕಾರ ಪೂಜಾ ಕೈಂಕರ್ಯಗಳು ನಡೆದವು.
ತಾಲ್ಲೂಕಿನ ಅಸುಂಡಿ ಗ್ರಾಮದ ಗಡೇಕಾರ ಮನೆತನದಿಂದ ಸಾಯಿ ಮೂರ್ತಿಗೆ ಬೆಳ್ಳಿ ಕಿರೀಟ ಧಾರಣೆ ಮಾಡಲಾಯಿತು. ಸಾಯಿಭಜನಾ ಮಂಡಳಿಯವರಿಂದ ಬೆಳಿಗ್ಗೆಯಿಂದ ರಾತ್ರಿವರೆಗೂ ಭಜನೆ, ಭಕ್ತಿಗೀತೆ, ಸಾಯಿ ನಾಮ ಜಪ ನಡೆದವು.
ಮಹಿಳೆಯರಿಗೆ ಉಡಿ ತುಂಬಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಾಯಿ ಬಾಬಾರಿಗೆ ನೈವೇದ್ಯ, ಆರತಿ ಮಾಡಲಾಯಿತು. ಮಧ್ಯಾಹ್ನ ಭಕ್ತರಿಗೆ ಪ್ರಸಾದ ನಡೆದು ಸಂಜೆ ಆರತಿ, ಪಲ್ಲಕ್ಕಿ ಉತ್ಸವ ಹಾಗೂ ಶೇಜಾರತಿಯೊಂದಿಗೆ ಕಾರ್ಯಕ್ರಮ ಮಂಗಲವಾಯಿತು.
ಸಾಯಿ ಸದ್ಭಕ್ತ ಮಂಡಳಿಯ ಅಧ್ಯಕ್ಷ ಸಿ.ಬಿ.ನಾವದಗಿ, ಕಾರ್ಯಾಧ್ಯಕ್ಷ ಸಿ.ಜಿ. ತುರಮರಿ, ಬಿ.ಎಂ.ಯಲಿಗಾರ, ಡಾ.ಎನ್.ಸಿ. ಬೆಂಡಿಗೇರಿ, ಜೆ.ಎಸ್.ಶಿಂತ್ರಿ, ಜಿ.ಐ. ಹೀರೆಮಠ, ಎಸ್.ಎನ್. ಹೊನ್ನಬಿಂದಗಿ, ಎಸ್.ಬಿ.ಯಲ್ಲರಡ್ಡಿ, ಮಯೂರ ಕಾರದಗಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.