ADVERTISEMENT

ಕಳಪೆ ಫಲಿತಾಂಶ: ಅನುದಾನ, ಬಡ್ತಿಗೆ ತಡೆ

ಶೇ 60ರಷ್ಟು ಫಲಿತಾಂಶ ನೀಡದ ಅನುದಾನಿ ಶಾಲೆಗಳು, ಶಿಕ್ಷಕರ ಮೇಲೆ ಸರ್ಕಾರದ ತೂಗುಗತ್ತಿ

ಸಂತೋಷ ಈ.ಚಿನಗುಡಿ
Published 25 ಜೂನ್ 2025, 5:48 IST
Last Updated 25 ಜೂನ್ 2025, 5:48 IST

ಬೆಳಗಾವಿ: ಎಸ್ಎಸ್ಎಲ್‌ಸಿ ಫಲಿತಾಂಶ ಕಳಪೆ ಬಂದ ಕಾರಣ, ರಾಜ್ಯದ 1,260 ಶಾಲೆಗಳು ಅನುದಾನ ಕಳೆದುಕೊಳ್ಳುವ ಭೀತಿ ಎದುರಿಸುತ್ತಿವೆ. ವಿಷಯವಾರು ಫಲಿತಾಂಶ ಕಡಿಮೆ ನೀಡಿದ 3,000ಕ್ಕೂ ಹೆಚ್ಚು ಶಿಕ್ಷಕರು ಬಡ್ತಿಯಿಂದ ವಂಚಿತರಾಗಲಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 60ಕ್ಕಿಂತ ಕಡಿಮೆ ಸಾಧನೆ ತೋರಿದ ಶಾಲೆಗಳ ಅನುದಾನ ರದ್ದು ಮಾಡಲು ಹಾಗೂ ಶಿಕ್ಷಕರ ಬಡ್ತಿ ತಡೆಯಲು ಸರ್ಕಾರ ನಿರ್ಧರಿಸಿದೆ. ಮೇ 30ರಂದು ಆದೇಶ ಹೊರಡಿಸಿದೆ.

ಅನುದಾನಕ್ಕೆ ಒಳಪಟ್ಟ ಶಾಲೆಗಳೇ 2024–25ನೇ ಸಾಲಿನಲ್ಲಿ ಕಳಪೆ ಫಲಿತಾಂಶ ಪಡೆದಿವೆ. ಇದರ ಹೊಣೆಯನ್ನು ಸಂಸ್ಥೆಗಳ ಮೇಲೆ ಹೊರಿಸಲು ಸರ್ಕಾರ ನಾಲ್ಕು ಕಠಿಣ ಹೆಜ್ಜೆಗಳನ್ನು ಇಟ್ಟಿದೆ.

ADVERTISEMENT

ಇಂಥ ಶಾಲೆಯ ವಿಷಯವಾರು ಫಲಿತಾಂಶವನ್ನು ಪರಿಗಣಿಸಿ ಶೇ 60ಕ್ಕಿಂತ ಕಡಿಮೆ ಫಲಿತಾಂಶ ಬಂದ ವಿಷಯ ಶಿಕ್ಷಕರ ವೇತನ ಬಡ್ತಿ ತಡೆಯುವುದು, ಸತತ ಮೂರು ವರ್ಷಗಳಿಂದ ಶೇ 60ಕ್ಕಿಂತ ಕಡಿಮೆ ಫಲಿತಾಂಶ ನೀಡಿದ ವಿಷಯ ಶಿಕ್ಷಕರ ವೇತನಾನುದಾನವನ್ನೂ ನಿಲ್ಲಿಸುವುದು, ಐದು ವರ್ಷಗಳವರೆಗೆ ಶೇ 50ರಷ್ಟು ಫಲಿತಾಂಶ ಪಡೆಯದ ಸಂಸ್ಥೆಗಳ ಅನುದಾನ ರದ್ದು ಮಾಡುವುದು, ಖಾಲಿ ಹುದ್ದೆಗಳ ಭರ್ತಿಯಲ್ಲೂ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಆದೇಶ ಹೊರಡಿಸಲಾಗಿದೆ.

ಇದರಿಂದ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಮೇಲೆ ತೂಗುಗತ್ತಿ ನೇತಾಡುತ್ತಿದೆ.

ಸಂಸ್ಥೆಗಳ ವಾದ ಏನು?: 

‘ಪ್ರಾಥಮಿಕ ಹಂತದಿಂದ ಮಕ್ಕಳು ನೇರವಾಗಿ ಪಾಸ್‌ ಆಗುತ್ತಾರೆ. ಎಸ್‌ಎಸ್‌ಎಲ್‌ಸಿ ಬಂದಾಗ ಗಂಭೀರತೆಯೇ ಇಲ್ಲವಾಗುತ್ತದೆ. ಪ್ರಾಥಮಿಕ ಹಂತದಲ್ಲೂ ಒಂದು ಬೋರ್ಡ್‌ ಪರೀಕ್ಷೆ ಇದ್ದರೆ ಈ ಅವಾಂತರ ತಪ್ಪಿಸಲು ಸಾಧ್ಯ’ ಎಂಬುದು ಶಿಕ್ಷಣ ಸಂಸ್ಥೆಯ ಅಧ್ಯಕ್ಷರೊಬ್ಬರ ವಾದ.

‘2025ನೇ ಸಾಲಿನಲ್ಲಿ ಅತಿ ಹೆಚ್ಚು ಶಿಕ್ಷಕರು (ಶೇ 12) ನಿವೃತ್ತಿ ಹೊಂದಿದ್ದಾರೆ. ಕಳೆದ 9 ವರ್ಷಗಳಿಂದಲೂ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಮಾಡಿಕೊಂಡಿಲ್ಲ. ಅನುದಾನಿತ 9,665 ಹುದ್ದೆಗಳು ಖಾಲಿ ಇವೆ. ಲೆಕ್ಕಾಚಾರದಂತೆ ಪ್ರತಿ ಶಾಲೆಯಲ್ಲೂ ಮೂರು ಶಿಕ್ಷಕ ಹುದ್ದೆಗಳು ಖಾಲಿ ಬಿದ್ದಿವೆ. ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾದರೂ ಇರುತ್ತಾರೆ. ಖಾಸಗಿ ಶಾಲೆಗಳಲ್ಲಿ ಇದು ಕಷ್ಟಕರ’ ಎಂಬುದು ಅವರ ವಾದ.

ಶೇ 40ಕ್ಕೂ ಕಡಿಮೆ ಫಲಿತಾಂಶ ತಂದ ಶಾಲೆಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂಬ ಕಾಯ್ದೆ ಇದೆ. ಆದರೆ, ಸರ್ಕಾರ ಅದನ್ನು ಶೇ 60ಕ್ಕೆ ಏರಿಸಿದ್ದು ಸರಿಯಲ್ಲ. ಈ ಕ್ರಮದಿಂದ ಸಂಸ್ಥೆಗಳಿಗೂ ಪೆಟ್ಟು ಬೀಳಲಿದೆ, ಶಿಕ್ಷಕರ ಆತ್ಮಸ್ಥೈರ್ಯವೂ ಕುಸಿಯುತ್ತದೆ ಎಂದು ಶಿಕ್ಷಕಿ ವತ್ಸಲಾ ದೂರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.