ADVERTISEMENT

ಕಬ್ಬು ದರ ನಿಗದಿ: ಸಿ.ಎಂ. ಡಿ.ಸಿ ಸೇರಿ ಹಲವರಿಗೆ ಕಾರಣ ಕೇಳಿ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 13:50 IST
Last Updated 14 ಡಿಸೆಂಬರ್ 2018, 13:50 IST

ಬೆಳಗಾವಿ: ಕಬ್ಬಿಗೆ ದರ ನಿಗದಿಪಡಿಸುವ ಸಂಬಂಧ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತರು ಲಿಖಿತ ಒಡಂಬಡಿಕೆ ಮಾಡಿಕೊಳ್ಳಬೇಕೆಂದು ಮುಖ್ಯಮಂತ್ರಿ ಹೇಳಿರುವುದು ಕಾನೂನು ಬಾಹಿರ ಎಂದು ರಾಷ್ಟ್ರೀಯ ರೈತ ಸಂಘದ ಅಧ್ಯಕ್ಷ, ವಕೀಲ ಬಿ.ಪಿ. ಶೇರಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕರ್ನಾಟಕ ಕಬ್ಬು (ನಿಯಂತ್ರಣ, ಖರೀದಿ ಹಾಗೂ ಪೂರೈಕೆ) ಕಾಯ್ದೆ– 2013ರ ಪ್ರಕಾರ ಕಬ್ಬಿನ ದರವನ್ನು ಕೇಂದ್ರ ಸರ್ಕಾರ (ಎಫ್‌ಆರ್‌ಪಿ) ಹಾಗೂ ರಾಜ್ಯ ಸರ್ಕಾರ (ಎಸ್‌ಎಪಿ) ನಿಗದಿಪಡಿಸುತ್ತವೆ. ಕಾರ್ಖಾನೆಯವರು ಹಾಗೂ ರೈತರು ಒಡಂಬಡಿಕೆ ಮಾಡುವ ಮೂಲಕ ದರ ನಿಗದಿ ಮಾಡಿಕೊಂಡರೆ ಶಿಕ್ಷಾರ್ಹ ಅಪರಾಧವಾಗುತ್ತದೆ. ಮೂರು ವರ್ಷ ಜೈಲು ಹಾಗೂ ದಂಡ ವಿಧಿಸಬಹುದಾಗಿದೆ’ ಎಂದು ತಿಳಿಸಿದರು.

‘ಲಿಖಿತ ಒಡಂಬಡಿಕೆ ಮಾಡಿಕೊಳ್ಳುವಂತೆ ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಹಾಗೂ ರೈತರಿಗೆ ಸೂಚನೆ ನೀಡಿದ್ದು ಅಪರಾಧವಾಗಿದ್ದು, ನಿಮ್ಮ ಮೇಲೆ ಏಕೆ ಕ್ರಮಕೈಗೊಳ್ಳಬಾರದೆಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಸಕ್ಕರೆ ಸಚಿವ ಕೆ.ಜೆ. ಜಾರ್ಜ್‌, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಬ್ಬು ಅಭಿವೃದ್ಧಿ ಆಯುಕ್ತ, ಬೆಳಗಾವಿ ಜಿಲ್ಲಾಧಿಕಾರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಹಾಗೂ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರಿಗೆ ಕಾರಣ ಕೇಳಿ ನೋಟಿಸ್‌ ನೀಡಿದ್ದೇನೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.