ADVERTISEMENT

ಜಿಲ್ಲಾಸ್ಪತ್ರೆ ಆವರಣದಲ್ಲಿ ಕಣ್ಣೀರ ಕಥೆಗಳು

ಆಮ್ಲಜನಕ ಹಾಸಿಗೆಗಾಗಿ ಅಂಗಲಾಚಿದ ರೋಗಿಗಳು

​ಪ್ರಜಾವಾಣಿ ವಾರ್ತೆ
Published 5 ಮೇ 2021, 11:29 IST
Last Updated 5 ಮೇ 2021, 11:29 IST

ಬೆಳಗಾವಿ: ನಗರದಲ್ಲಿ ಆಮ್ಲಜನಕ ಹಾಸಿಗೆಗಾಗಿ ಪರದಾಟ ತೀವ್ರವಾಗುತ್ತಿದೆ. ನಮ್ಮಲ್ಲಿ ಲಭ್ಯವಿಲ್ಲ ಎಂದು ಖಾಸಗಿ ಆಸ್ಪತ್ರೆಯವರು ಕೈಚೆಲ್ಲುತ್ತಿದ್ದಾರೆ. ಆಮ್ಲಜನಕ ಪೂರೈಕೆ ಆಗುತ್ತಿಲ್ಲ ಎಂದು ಅವರು ತಿಳಿಸುತ್ತಿದ್ದಾರೆ. ಹಾಸಿಗೆ ಖಾಲಿ ಇಲ್ಲ ಎಂದು ಜಿಲ್ಲಾಸ್ಪತ್ರೆಯವರು ದಾಖಲಿಸಿಕೊಳ್ಳುತ್ತಿಲ್ಲ. ಹೀಗಾಗಿ, ರೋಗಿಗಳು ಸಕಾಲಕ್ಕೆ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ನಿತ್ಯವೂ ಒಂದಿಲ್ಲೊಂದು ಕಣ್ಣೀರಿನ ಕಥೆಗಳಿಗೆ ಹಾಗೂ ‍ಪರದಾಟದ ಸನ್ನಿವೇಶಗಳಿಗೆ ಜಿಲ್ಲಾಸ್ಪತ್ತೆ ಆವರಣ ಸಾಕ್ಷಿಯಾಗುತ್ತಿದೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬೈಲಹೊಂಗಲ ತಾಲ್ಲೂಕು ಸಾಣಿಕೊಪ್ಪದ ಈರಪ್ಪ ಎನ್ನುವವರು, ‘ಮಗಳಿಗೆ ಹೆರಿಗೆ ಆಗಿದೆ. ಕೆಲವು ದಿನಗಳು ಮನೆಯಲ್ಲಿ ಇರಿಸಿಕೊಂಡಿದ್ದೆವು. ಕೋವಿಡ್ ದೃಢಪಟ್ಟಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೆವು. ಅವರು ಐದು ದಿನ ದಾಖಲಿಸಿಕೊಂಡು ಲಕ್ಷಾಂತರ ರೂಪಾಯಿ ಬಿಲ್ ಮಾಡಿ ಮಂಗಳವಾರ ತಡರಾತ್ರಿ ಇಲ್ಲಿ ಆಮ್ಲಜನಕ ಖಾಲಿಯಾಗಿದೆ ಎಂದರು. ನಿಮ್ಮ ಮಗಳನ್ನು ಕರೆದುಕೊಂಡು ಜಿಲ್ಲಾಸ್ಪತ್ರೆಗೆ ಹೋಗಿ ಎಂದು ತಿಳಿಸಿದರು. ಹೀಗಾಗಿ, ಇಲ್ಲಿಗೆ ಕರೆ ತಂದಿದ್ದೇವೆ’ ಎಂದು ತಿಳಿಸಿದರು.

ADVERTISEMENT

‘ಇಲ್ಲೂ ಆಮ್ಲಜನಕ ವ್ಯವಸ್ಥೆ ಸರಿ ಇಲ್ಲ. ಇದರಿಂದಾಗಿ, ತ್ರಾಸಾಗುತ್ತಿದೆ ಎಂದು ಮಗಳು ಮೊಬೈಲ್‌ ಫೋನ್‌ ಮಾಡಿ ಹೇಳುತ್ತಿದ್ದಾಳೆ. ಸರ್ಕಾರಿ ಆಸ್ಪತ್ರೆಯಲ್ಲೇ ಹೀಗಾದರೆ ಹೇಗೆ? ಸರ್ಕಾರ ಇತ್ತ ಗಮನಹರಿಸಬೇಕು’ ಎಂದು ಕೋರಿದರು.

‘ಮಕ್ಕಳೊಂದು ಕಡೆ, ತಾಯಿಯೊಂದು ಕಡೆ ಇದ್ದಾರೆ. ಈಚೆಗೆ ಜನಿಸಿದ ಮಗುವಿಗೆ ಆಡಿನ ಹಾಲು ಕುಡಿಸುವಂತಹ ಸ್ಥಿತಿ ಬಂದಿದೆ’ ಎಂದು ಅಳಲು ತೋಡಿಕೊಂಡರು.

ವೆಂಟಿಲೇಟರ್‌ ಹಾಸಿಗೆ ಕೊಡಿಸಿ:ದಯಮಾಡಿ ಒಂದಾದರೂ ವೆಂಟಿಲೇಟರ್‌ ಹಾಸಿಗೆ ಕೊಡಿಸುವಂತೆ ರೋಗಿಯೊಬ್ಬರ ಕುಟುಂಬದವರು ಅಂಗಲಾಚುತ್ತಾ ಗೋಳಾಡಿದ ಘಟನೆ ಬಿಮ್ಸ್‌ ಆಸ್ಪತ್ರೆ ಆವರಣದಲ್ಲಿ ಬುಧವಾರ ನಡೆಯಿತು.

ಮಹಾಂತೇಶ ನಗರದ ವ್ಯಕ್ತಿಯೊಬ್ಬರು ಕಫದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ವೆಂಟಿಲೇಟರ್ ಹಾಸಿಗೆ ಬೇಕಾಗಿದೆ. ಆದರೆ, ಇಲ್ಲಿ ಇಲ್ಲ ಎನ್ನುತ್ತಿದ್ದಾರೆ. ಇದರಿಂದ ಆತಂಕವಾಗುತ್ತಿದೆ ಎಂದು ತಿಳಿಸಿದರು.

‘ಚಿಕಿತ್ಸೆಗೆ ವೆಂಟಿಲೇಟರ್ ಇಲ್ಲ ಎನ್ನುತ್ತಿದ್ದಾರೆ. ಇಲ್ಲಿ ಆಮ್ಲಜನಕ ಸಮಸ್ಯೆ ತೀವ್ರವಾಗಿದೆ. ಬೆಳಿಗ್ಗೆಯಿಂದ ನಾಲ್ಕು ಮೃತದೇಹಗಳನ್ನು ಸಾಗಿಸಿದ್ದನ್ನು ನಾವೇ ನೋಡಿದ್ದೇವೆ. ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು. ಇಷ್ಟು ದೊಡ್ಡ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಹಾಸಿಗೆ ಒದಗಿಸಲಾಗುವುದಿಲ್ಲ ಎಂದರೆ ಅರ್ಥವೇನು?’ ಎಂದು ಸಂಬಂಧಿಕರು ಆಕ್ರೋಶದಿಂದ ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.