ADVERTISEMENT

ಜೈನ ಸಭೆ ಕಾರ್ಯ ಶ್ಲಾಘನೀಯ: ಶಾಸಕ ಅಭಯ ಪಾಟೀಲ

ಪುರಸ್ಕಾರ ‍ಪ್ರದಾನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 14:43 IST
Last Updated 21 ಜುಲೈ 2019, 14:43 IST
ಬೆಳಗಾವಿಯಲ್ಲಿ ಭಾನುವಾರ ನಡೆದ ದಕ್ಷಿಣ ಭಾರತ ಜೈನ ಸಭೆಯ 99ನೇ ‘ನೈಮಿತ್ತಿಕ ಅಧಿವೇಶನ’ ಮತ್ತು ಪುರಸ್ಕಾರ ಪ್ರದಾನ ಸಮಾರಂಭವನ್ನು ಕಾಶೀನಾಥ ಸ್ವಾಮೀಜಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮುಖಂಡರಾದ ಶಾಸಕ ಸಂಜಯ ಪಾಟೀಲ, ರಾವಸಾಹೇಬ ಪಾಟೀಲ, ಉದ್ಘಾಟಿಸಿದರು
ಬೆಳಗಾವಿಯಲ್ಲಿ ಭಾನುವಾರ ನಡೆದ ದಕ್ಷಿಣ ಭಾರತ ಜೈನ ಸಭೆಯ 99ನೇ ‘ನೈಮಿತ್ತಿಕ ಅಧಿವೇಶನ’ ಮತ್ತು ಪುರಸ್ಕಾರ ಪ್ರದಾನ ಸಮಾರಂಭವನ್ನು ಕಾಶೀನಾಥ ಸ್ವಾಮೀಜಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮುಖಂಡರಾದ ಶಾಸಕ ಸಂಜಯ ಪಾಟೀಲ, ರಾವಸಾಹೇಬ ಪಾಟೀಲ, ಉದ್ಘಾಟಿಸಿದರು   

‌ಬೆಳಗಾವಿ: ‘120 ವರ್ಷಗಳಿಂದ ಜೈನ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ದಕ್ಷಿಣ ಭಾರತ ಜೈನ ಸಭೆಯ ಕಾರ್ಯ ಶ್ಲಾಘನೀಯ’ ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು.

ಇಲ್ಲಿ ಭಾನುವಾರ ನಡೆದ ದಕ್ಷಿಣ ಭಾರತ ಜೈನ ಸಭೆಯ 99ನೇ ನೈಮಿತ್ತಿಕ ಅಧಿವೇಶನ (ಸರ್ವ ಸಾಧಾರಣ ಸಭೆ) ಮತ್ತು ವಿವಿಧ ಪುರಸ್ಕಾರಗಳ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಜೈನ ಸಭೆಯು ನಿಸ್ವಾರ್ಥ ಭಾವನೆಯಿಂದ ಸಮಾಜದ ಸೇವೆ ಮಾಡುತ್ತಾ ಬಂದಿರುವುದರಿಂದ ಭಾರತದ ಅತ್ಯುತ್ತಮ ಸೇವಾ ಸಂಸ್ಥೆ ಎಂದು ಗುರುತಿಸಿಕೊಂಡಿದೆ. ಸಮಾಜದ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ, ಅಧ್ಯಕ್ಷ ರಾವಸಾಹೇಬ ಪಾಟೀಲ ಮಾರ್ಗದರ್ಶನದಲ್ಲಿ ಉತ್ತಮವಾಗಿ ನಡೆಯುತ್ತಿದೆ’ ಎಂದರು.

ADVERTISEMENT

ಬಿಜೆ‍ಪಿ ಮುಖಂಡ ಸಂಜಯ ಪಾಟೀಲ ಮಾತನಾಡಿ, ‘ಮಹಾರಾಷ್ಟ್ರ ಮತ್ತು ಕರ್ನಾಟಕವನ್ನು ಒಗ್ಗೂಡಿಸುವ ಸಂಸ್ಥೆಯಾದ ದಕ್ಷಿಣ ಭಾರತ ಜೈನ ಸಭೆಯು ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತಾರವಾಗಿ ಬೆಳೆಸಬೇಕಾಗಿದೆ. ಸೇವೆ ಮಾಡುವವರನ್ನು ಟೀಕಿಸುವವರು ಇರುತ್ತರೆ. ಆ ಬಗ್ಗೆ ಗಮನ ಕೊಡದೇ ಸೇವೆ ಮುಂದುವರಿಸಬೇಕು’ ಎಂದರು.

ಸೊಲ್ಲಾಪುರದ ಡಾ.ರಣಜಿತ ಹೀರಾಲಾಲ ಗಾಂಧಿ (ಡಾ.ಕರ್ಮವೀರ ಭಾವುರಾವ ಪಾಟೀಲ ಶಿಕ್ಷಣ ಸೇವಾ ಪುರಸ್ಕಾರ), ಸಾಂಗ್ಲಿಯ ವಿದ್ಯಾಧರ ಬಳವಂತ ಚೌಗುಲೆ (ಬಿ.ಬಿ. ಪಾಟೀಲ ಸಮಾಜ ಸೇವಾ ಪುರಸ್ಕಾರ), ಘೋಡಗೇರಿಯ ಕಾಶೀನಾಥ ಸ್ವಾಮೀಜಿ (ಪದ್ಮಭೂಷಣ ಕ್ರಾಂತಿವೀರ ನಾಗನಾಥಅಣ್ಣ ನಾಯಕವಾಡಿ ಸಮಾಜ ಸೇವಾ ಪುರಸ್ಕಾರ), ಮೈಸೂರಿನ ಡಾ.ಶಾಂತಿಸಾಗರ ಶಿರಹಟ್ಟಿ (ಆಚಾರ್ಯ ಕುಂದಕುಂದ ಪ್ರಾಕೃತ ಗ್ರಂಥ ಸಂಶೋಧನಾ ಮತ್ತು ಲೇಖನ ಪುರಸ್ಕಾರ), ವಿಜಯ ದಾದಾ ಆವಟಿ (ಆಚಾರ್ಯ ವಿದ್ಯಾನಂದ ಸಾಹಿತ್ಯ (ಮರಾಠಿ) ಪುರಸ್ಕಾರ), ಧಾರವಾಡದ ಬಾಳಣ್ಣ ಎಸ್. ಶೀಗೆಹಳ್ಳಿ (ಆಚಾರ್ಯ ಬಾಹುಬಲಿ ಕನ್ನಡ ಸಾಹಿತ್ಯ) ಪುರಸ್ಕಾರ, ಇಚಲಕರಂಜಿಯ ಸುವರ್ಣಾ ಸುಕುಮಾರ ಚೌಗುಲೆ (ಡಾ.ಡಿ.ಎಸ್. ಬರಗಾಲೆ ಸಮಾಜಸೇವಾ ಪುರಸ್ಕಾರ), ಕಿಣಿಯ ಅಭಯ ಅಶೋಕ ಪಾಟೀಲ (ವೀರಾಚಾರ್ಯ ಬಾಬಾಸಾಹೇಬ ಕುಚನೂರೆ ಆದರ್ಶ ಯುವ ಪುರಸ್ಕಾರ), ಕೊಗನೋಳಿಯ ಅನಿಲ ಜಿನಗೌಡ ಪಾಟೀಲ (ಪ್ರಭಾತಕಾರ ವಾ.ರಾ. ಕೊಠಾರಿ ಆದರ್ಶ ಪತ್ರಕರ್ತ ಪುರಸ್ಕಾರ), ಬೆಲ್ಲದ ಬಾಗೇವಾಡಿಯ ಎಸ್.ವಿ. ಮುನ್ನೊಳ್ಳಿ (ಡಿ.ಎ. ಪಾಟೀಲ ಆದರ್ಶ ಶಿಕ್ಷಕ ಪುರಸ್ಕಾರ) ಅವರಿಗೆ ವಿವಿಧ ಪುರಸ್ಕಾರ ಪ್ರದಾನ ಮಾಡಲಾಯಿತು.

ಡಾ.ರಣಜಿತ ಗಾಂಧಿ ಅವರು ಭಾವುಸಾಹೇಬ ಗಾಂಧಿ ಪ್ರತಿಷ್ಠಾನದಿಂದ ದಕ್ಷಿಣ ಭಾರತ ಜೈನ ಸಭೆಗೆ ₹ 1 ಲಕ್ಷ ದೇಣಿಗೆ ನೀಡಿದರು. ಪ್ರಗತಿ’ ಮತ್ತು ‘ಜಿನವಿಜಯ’ ಪತ್ರಿಕೆಗಳನ್ನು ಬಿಡುಗಡೆ ಮಾಡಲಾಯಿತು. ಬೆಳಗಾವಿ-ಬೆಂಗಳೂರು ಸೂಪರ್‌ಫಾಸ್ಟ್‌ ರೈಲಿಗೆ ಶಾಂತಿಸಾಗರ ಶತಾಬ್ದಿ ಎಕ್ಸ್‌ಪ್ರೆಸ್‌ ಎಂದು ನಾಮಕರಣ ಮಾಡುವಂತೆ ಆಗ್ರಹಿಸುವ ನಿರ್ಣಯ ಸ್ವೀಕರಿಸಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು.

ಡಾ.ಅಜಿತ ಪಾಟೀಲ ಸ್ವಾಗತಿಸಿದರು. ಅಧ್ಯಕ್ಷ ರಾವಸಾಹೇಬ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಬಾಲಚಂದ್ರ ಪಾಟೀಲ ಸಭೆಯ ಉದ್ದೇಶಗಳನ್ನು ತಿಳಿಸಿದರು. ಉಪಾಧ್ಯಕ್ಷ ದತ್ತಾ ಡೋರ್ಲೆ ಮಾತನಾಡಿದರು. ಡಾ.ಎ.ಆರ್. ರೊಟ್ಟಿ ನಿರೂಪಿಸಿದರು. ಖಜಾಂಚಿ ಸಂಜಯ ಶೇಟೆ ವಂದಿಸಿದರು.

ಟ್ರಸ್ಟಿ ಅಶೋಕ ಜೈನ, ಮಹಾಮಂತ್ರಿ ಬಾಳಾಸಾಹೇಬ ಪಾಟೀಲ, ವಿಭಾಗೀಯ ಉಪಾಧ್ಯಕ್ಷ ಸಿದ್ದಣ್ಣ ನಾಗನೂರ, ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್‌ ಅಧ್ಯಕ್ಷ ಕೀರ್ತಿಕುಮಾರ ಕಾಗವಾಡ, ಉಪಾಧ್ಯಕ್ಷ ಪುಷ್ಪಕ ಹನಮಣ್ಣವರ, ಕಾರ್ಯದರ್ಶಿ ಬಾಹುಬಲಿ ಸಾವಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.