ADVERTISEMENT

ಚಿಕ್ಕೋಡಿ: ಎಂದೂ ಬತ್ತದ ರಾಮಲಿಂಗೇಶ್ವರ ಬಾವಿ

20 ಅಡಿ ಬಾವಿಯಲ್ಲಿ ಮಾತ್ರ ನಿರಂತರ ಜಲ ಪೂರಣ

ಪ್ರಜಾವಾಣಿ ವಿಶೇಷ
Published 17 ಏಪ್ರಿಲ್ 2024, 4:45 IST
Last Updated 17 ಏಪ್ರಿಲ್ 2024, 4:45 IST
ಚಿಕ್ಕೋಡಿ ತಾಲ್ಲೂಕಿನ ಉಮರಾಣಿಯ ರಾಮಲಿಂಗ ದೇವಸ್ಥಾನ
ಚಿಕ್ಕೋಡಿ ತಾಲ್ಲೂಕಿನ ಉಮರಾಣಿಯ ರಾಮಲಿಂಗ ದೇವಸ್ಥಾನ   

ಚಿಕ್ಕೋಡಿ: ತಾಲ್ಲೂಕಿನ ಉಮರಾಣಿ ಹೊರವಲಯದಲ್ಲಿರುವ ರಾಮಲಿಂಗ ದೇವಸ್ಥಾನ ಪೌರಾಣಿಕ ಹಾಗೂ ಐತಿಹಾಸಿಕ ಮಹತ್ವ ಹೊಂದಿದೆ. ಇಡೀ ಜಿಲ್ಲೆಯಲ್ಲಿ ಭೀಕರ ಬರದಿಂದ ಜಲಕ್ಷಾಮ ಉಂಟಾಗಿದೆ. ನದಿ, ಹಳ್ಳ, ಕೊಳ್ಳಗಳು ಬತ್ತಿವೆ. ಆದರೆ, ಇಲ್ಲಿನ ರಾಮಲಿಂಗೇಶ್ವರ 20 ಅಡಿ ಬಾವಿಯಲ್ಲಿ ಮಾತ್ರ ನಿರಂತರ ಜಲ ಪೂರಣವಾಗಿದೆ.

ಗ್ರಾಮದಿಂದ 3 ಕಿ.ಮೀ ದೂರದಲ್ಲಿರುವ ಈ ಬಾವಿ ಎಂಥದ್ದೇ ಬಿರು ಬೇಸಿಗೆಯಲ್ಲೂ, ಬರದಲ್ಲೂ ಬತ್ತಿದ ಉದಾಹರಣೆ ಇಲ್ಲ. ಬೆಟ್ಟ ಗುಡ್ಡಗಳ ನಡುವೆ ತಲೆ ಎತ್ತಿನಿಂತ ದೇವಸ್ಥಾನದಲ್ಲಿ ಲಿಂಗ ಇದೆ. ಶ್ರೀರಾಮ ತನ್ನ ವನವಾಸದ ಸಮಯದಲ್ಲಿ ಲಿಂಗ ನಿರ್ಮಾಣ ಮಾಡಿದ್ದ ಎಂದು ಹೇಳಲಾಗುತ್ತದೆ. ಸುತ್ತಲೂ ಬೋಳು ಬೆಟ್ಟಗಳಿಂದ ಕೂಡಿದ ಈ ಪ್ರದೇಶದಲ್ಲಿ ಪೂಜೆಗೆ ನೀರು ದೊರಕದ ಹಿನ್ನೆಲೆಯಲ್ಲಿ ರಾಮ ಬಾಣ ಬಿಟ್ಟಿದ್ದರಿಂದಲೇ ಬಾವಿ ಸೃಷ್ಟಿಯಾಗಿದೆ. ಈ ಬಾವಿಯ ನೀರನ್ನು ತೆಗೆದುಕೊಂಡು ಅಂದು ರಾಮ ಲಿಂಗಪೂಜೆ ಮಾಡಿದ್ದಾನೆ ಎಂಬುದು ಪ್ರತೀತಿ. ಮಂದಿರದ ಗೋಡೆಗಳಲ್ಲಿ ಹಳೆಯ ಕಾಲದ ಮೋಡಿ ಲಿಪಿಯ ಶಿಲಾ ಬರಹಗಳು ಇದ್ದು ಇದಕ್ಕೆ ಪುಷ್ಟಿ ಕೊಡುವಂತಿವೆ.

ಶ್ರೀರಾಮ ನವಮಿ, ಶಿವರಾತ್ರಿ, ಶ್ರಾವಣ ಮಾಸ, ಅಮಾವಾಸ್ಯೆ, ಪ್ರತಿ ಸೋಮವಾರ ಸೇರಿದಂತೆ ವಿವಿಧ ಸಂದರ್ಭದಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಪೂಜೆ, ಅಭಿಷೇಕ ಸಲ್ಲಿಸಿ ದರ್ಶನ ಪಡೆಯುತ್ತಾರೆ. ಶ್ರಾವಣ ಮಾಸದ ಕೊನೆಯ ಸೋಮವಾರ ಜಾತ್ರೆ ನಡೆಯುತ್ತದೆ. ದೇವಸ್ಥಾನದ ಗರ್ಭಗುಡಿ ಶಿಥಿಲಗೊಂಡಿದ್ದು ಜೀರ್ಣೋದ್ಧಾರಕ್ಕೆ ಕಾದಿದೆ.

ADVERTISEMENT

ದೇವಸ್ಥಾನದ ಸುತ್ತಲೂ ಆವರಣ ಗೋಡೆ, ಸಮುದಾಯ ಭವನ ಪೂರ್ಣಗೊಳಿಸುವುದು, ಪಾರ್ಕಿಂಗ್ ವ್ಯವಸ್ಥೆ, ದೇವಸ್ಥಾನಕ್ಕೆ ಆಗಮಿಸುವ ರಸ್ತೆಗಳನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡುವುದು ಅಗತ್ಯವಾಗಿದೆ ಎಂದು ಅರ್ಚಕ ಪ್ರಕಾಶ ಪೂಜಾರಿ ಮನವಿ ಮಾಡುತ್ತಾರೆ.

ಐತಿಹಾಸಿಕ ದೇವಸ್ಥಾನ ಹಾಗೂ ಬಾವಿಯನ್ನು ರಕ್ಷಿಸಬೇಕಾಗಿದೆ. ಇಲ್ಲಿನ ಪರಿಸರ ಹಸಿರುಮಯ ಮಾಡಬೇಕಿದೆ ಎನ್ನುತ್ತಾರೆ ಸದಾಶಿವ ಕಾರಟಗಿ.

ಚಿಕ್ಕೋಡಿಯಿಂದ 5 ಕಿ.ಮೀ ದೂರ ಇರುವ ರಾಮಲಿಂಗ ಕೋಡಿ ದೇವಸ್ಥಾನಕ್ಕೆ ತೆರಳಲು ರಸ್ತೆ ನಿರ್ಮಾಣ ಮಾಡಲಾಗಿದೆ. ದೇವಸ್ಥಾನದ ಬಳಿ ಬೆಟ್ಟದಲ್ಲಿ ಇಳಿಯಲು ಮೆಟ್ಟಿಲುಗಳ ವ್ಯವಸ್ಥೆಯನ್ನು ಶಾಸಕ ದುರ್ಯೋಧನ ಐಹೊಳೆ ಮಾಡಿಸಿದ್ದಾರೆ. ಉಳಿದ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಗಮನ ಕೊಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.