ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: 78,772 ವಿದ್ಯಾರ್ಥಿಗಳ ನೋಂದಣಿ

ಎಸ್ಸೆಸ್ಸೆಲ್ಸಿ ಪರೀಕ್ಷೆ: ಬೆಳಗಾವಿಯಲ್ಲಿ 120, ಚಿಕ್ಕೋಡಿಯಲ್ಲಿ 151 ಕೇಂದ್ರ, 60 ಜಾಗೃತ ದಳ ತಂಡಗಳ ರಚನೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 4:57 IST
Last Updated 30 ಮಾರ್ಚ್ 2023, 4:57 IST
1
1   

ಬೆಳಗಾವಿ: ಜಿಲ್ಲೆಯಲ್ಲಿ ಮಾರ್ಚ್‌ 31ರಿಂದ ಏಪ್ರಿಲ್‌ 15ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, 78,772 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

ವಿಧಾನಸಭೆ ಚುನಾವಣೆ ಪ್ರಕ್ರಿಯೆಗಳ ನಡುವೆಯೂ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಕಲ ಸಿದ್ಧತೆ
ಮಾಡಿಕೊಂಡಿದೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 120 ಕೇಂದ್ರಗಳಲ್ಲಿ 33,182 ವಿದ್ಯಾರ್ಥಿಗಳು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 151 ಕೇಂದ್ರಗಳಲ್ಲಿ 45,590 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಈಗ ಕೊರೊನಾ ಹಾವಳಿ ತಗ್ಗಿದೆ. ಆದರೂ, ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಪ್ರತಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ
ನಿಯೋಜಿಸಲಾಗಿದೆ.

ADVERTISEMENT

ಪ್ರಶ್ನೆಪತ್ರಿಕೆಗಳನ್ನು ಸಕಾಲಕ್ಕೆ ಆಯಾ ಕೇಂದ್ರಗಳಿಗೆ ತಲುಪಿಸುವುದಕ್ಕಾಗಿ ಬೆಳಗಾವಿಯಲ್ಲಿ 49, ಚಿಕ್ಕೋಡಿಯಲ್ಲಿ 58 ಮಾರ್ಗಗಳನ್ನು ರಚಿಸಿ, ಒಟ್ಟು 107 ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ. ಎಲ್ಲ ಕೇಂದ್ರಗಳನ್ನು ಶುಚಿಗೊಳಿಸಿ, ವಿದ್ಯಾರ್ಥಿಗಳ ಸ್ವಾಗತಕ್ಕೆ ಸಜ್ಜುಗೊಳಿಸಲಾಗುತ್ತಿದೆ.

ಕ್ಯಾಮೆರಾ ಅಳವಡಿಕೆ ಕಡ್ಡಾಯ: ಪರೀಕ್ಷೆಯಲ್ಲಿ ಅಕ್ರಮಕ್ಕೆ ಕಡಿವಾಣ ಹಾಕುವ ಸಲುವಾಗಿ ಎಲ್ಲ ಕೇಂದ್ರಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ 60 ಜಾಗೃತ ದಳ ತಂಡ ರಚಿಸಲಾಗಿದೆ. ಜತೆಗೆ, ತಲಾ 271 ಸ್ಥಾನಿಕ ಜಾಗೃತ ದಳ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದು, ಕೇಂದ್ರದ ಸುತ್ತಲಿನ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಚುನಾವಣೆ ಕೆಲಸದಿಂದ ವಿನಾಯಿತಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಕೆಲಸಕ್ಕೆ ನಿಯೋಜನೆಗೊಂಡ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವಿಧಾನಸಭೆ ಚುನಾವಣೆ ಕರ್ತವ್ಯಕ್ಕೂ ಬಳಸಿಕೊಳ್ಳಲಾಗುತ್ತಿದೆ.

‘ಪರೀಕ್ಷಾ ದಿನಗಳಂದು ನಮ್ಮ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗೆ ಚುನಾವಣೆ ಕೆಲಸದಿಂದ ವಿನಾಯಿತಿ ನೀಡಲಾಗಿದೆ. ಹಾಗಾಗಿ ಪರೀಕ್ಷೆಗೆ ಏನೂ ತೊಂದರೆಯಾಗದು’ ಎಂದು ಬೆಳಗಾವಿ ಡಿಡಿಪಿಐ ಬಸವರಾಜ ನಾಲತವಾಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.