ADVERTISEMENT

ಬೆಳಗಾವಿ: ರಾಜ್ಯ ಬಜೆಟ್: ಪ್ರತಿಕ್ರಿಯೆಗಳು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2022, 12:17 IST
Last Updated 4 ಮಾರ್ಚ್ 2022, 12:17 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ವಿಶೇಷವಿಲ್ಲದ ಬಜೆಟ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಏನೂ ವಿಶೇಷವಿಲ್ಲ. ನಿರಾಶಾದಾಯಕವಾಗಿದ್ದು, ಪ್ರತಿ ಬಾರಿಯಂತೆಯೇ ಬೆಳಗಾವಿ ಜಿಲ್ಲೆಗೆ ಕಡೆಗಣಿಸಲಾಗಿದೆ. ಕೋವಿಡ್ ಲಾಕ್‌ಡೌನ್ ಸಂಕಷ್ಟದಿಂದ ಜನತೆ ಇನ್ನೂ ಚೇತರಿಸಿಕೊಂಡಿಲ್ಲ. ಅವರ ನೆರವಿಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಜನರ ನಿರೀಕ್ಷೆ ಹುಸಿಯಾಗಿದೆ.

ಸತೀಶ ಜಾರಕಿಹೊಳಿ, ಕಾರ್ಯಾಧ್ಯಕ್ಷ, ಕೆಪಿಸಿಸಿ

ADVERTISEMENT

****

ರೈತರಿಗೆ ಇನ್ನೂ ಆದ್ಯತೆ ಸಿಗಬೇಕಿತ್ತು

ಮಹದಾಯಿ ಯೋಜನೆಗೆ ಹೋದ ಬಾರಿಯೂ ಅನುದಾನ ಇಟ್ಟಿದ್ದರು. ಕೆಲಸವೇ ಶುರುವಾಗಿಲ್ಲ. ಹಿಂದಿನಿಂದಲೂ ನನೆಗುದಿಗೆ ಬಿದ್ದಿದೆ. ಕಾಮಗಾರಿ ಶುರು ಮಾಡಲು ಕ್ರಮ ಕೈಗೊಳ್ಳಬೇಕು. ‘ರೈತಶಕ್ತಿ’ ಯೋಜನೆ ಟ್ರ್ಯಾಕ್ಟರ್‌ ಇಲ್ಲದವರಿಗೂ ದೊರೆಯುವಂತೆ ಆಗಬೇಕು. ಕೋವಿಡ್‌ನಿಂದ ಕಂಗೆಟ್ಟಿದ್ದ ರೈತರಿಗೆ ಇನ್ನೂ ಹೆಚ್ಚಿನ ಆದ್ಯತೆ ಸಿಗಬೇಕಿತ್ತು.

ಜಯಶ್ರೀ ಗುರನ್ನವರ, ರೈತ ಹೋರಾಟಗಾರ್ತಿ

***

ಎಲ್ಲ ಕ್ಷೇತ್ರಕ್ಕೂ ಆದ್ಯತೆ

ಶಿಕ್ಷಣ, ಆರೋಗ್ಯ, ಉದ್ಯೋಗ, ಕೃಷಿ, ಕೈಗಾರಿಕೆ, ನೇಕಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಚೊಚ್ಚಲ ಬಜೆಟ್‌ನಲ್ಲೇ ಸರ್ವ ಸ್ಪರ್ಶಿ ಕ್ರಮ ಕೈಗೊಂಡು ಮುಖ್ಯಮಂತ್ರಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಭಯ ಪಾಟೀಲ, ಶಾಸಕ, ಬೆಳಗಾವಿ ದಕ್ಷಿಣ

****

ಆಶಾದಾಯಕವಾಗಿದೆ

ಕೃಷಿ ಮತ್ತು ನೀರಾವರಿಗೆ ಆದ್ಯತೆ ಕೊಡಲಾಗಿದೆ. ನೇಕಾರರಿಗೆ ನೆರವಾಗಿದ್ದಾರೆ. ಶಿಕ್ಷಣಕ್ಕೂ ಒತ್ತು ನೀಡಲಾಗಿದೆ. ಆಶಾದಾಯಕ ಬಜೆಟ್ ಇದಾಗಿದೆ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ನೆರವಾಗಿರುವುದು ಸ್ವಾಗತಾರ್ಹವಾಗಿದೆ.

ಬಿ.ಎಸ್. ಮುಳ್ಳೂರ, ನಿವೃತ್ತ ನೌಕರ, ಅಂಚೆ ಇಲಾಖೆ, ಹಲಗತ್ತಿ

****

ನಿರಾಸೆ ಮೂಡಿಸಿದೆ

ಉತ್ತರ ಕರ್ನಾಟಕದ ಬಹು ದಿನಗಳ ಬೇಡಿಕೆಗಈ ಈಡೇರಿಕೆಗೆ ಬಜೆಟ್‌ನಲ್ಲಿ ಗಮನಹರಿಸಿಲ್ಲ. ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡುತ್ತಾರೆ ಎಂಬ ನಮ್ಮ ಭಾಗದ ಜನರ ನಿರೀಕ್ಷೆ ಹುಸಿಯಾಗಿದೆ. ಇದರಿಂದ ನಿರಾಸೆಯಾಗಿದೆ. ರಾಯಬಾಗ ಮತಕ್ಷೇತ್ರದಲ್ಲಿ ಕರಗಾಂವ, ಬೆಂಡವಾಡ, ಹನುಮಾನ ಏತ ನೀರಾವರಿ ಯೋಜನೆ ಜಾರಿಗೊಳಿಸದೆ ರೈತರಿಗೆ ಅನ್ಯಾಯವಾಗಿದೆ.

ಕಾಡಗೌಡ ಪಾಟೀಲ, ಮುಖಂಡ, ಚಿಕ್ಕೋಡಿ

****

ಕೈಗಾರಿಕೆಗೆ ಆದ್ಯತೆ ಕೊಡಬೇಕಿತ್ತು

ಬೆಳಗಾವಿಯಲ್ಲಿ ಕಿದ್ವಾಯಿ ಪ್ರಾದೇಶಿಕ ಕೇಂದ್ರ ಸ್ಥಾಪನೆ ಸೇರಿದಂತೆ ಬಜೆಟ್‌ನಲ್ಲಿ ಜಿಲ್ಲೆಗೆ ಸಂಬಂಧಿಸಿದ ಕೆಲವು ಸ್ವಾಗತಾರ್ಹ ಕ್ರಮಗಳಿವೆ. ಆದರೆ, ಕೈಗಾರಿಕೆ ಅಭಿವೃದ್ಧಿ ಸ್ನೇಹಿ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರದ ಅಭಿವೃದ್ಧಿಗೆ ನಿರ್ದಿಷ್ಟ ಯೋಜನೆ ನೀಡಿಲ್ಲ. ಬಜೆಟ್ ಅನುಷ್ಠಾನದಿಂದಾಗುವ ಪರಿಣಾಮವನ್ನು ಕಾದು ನೋಡಬೇಕಿದೆ.

ಸತೀಶ ತೆಂಡುಲ್ಕರ್, ಅಧ್ಯಕ್ಷ, ಬೆಳಗಾವಿ ಟ್ರೇಡರ್‌ಗಳ ವೇದಿಕೆ

ಕೊರತೆ ಪ್ರಮಾಣ ಹೆಚ್ಚಾಗಲಿದೆ

ರಾಜ್ಯ ಬಜೆಟ್‌ ಅಭಿವೃದ್ಧಿಗೆ ಪೂರಕವಾಗಿದ್ದು, ಎಲ್ಲ ವರ್ಗದವರಿಗೂ ಅನುಕೂಲವಾಗಲಿದೆ. ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ, ಸರ್ಕಾರ ಮಾಡುವ ವೆಚ್ಚವು ₹ 2.66 ಲಕ್ಷ ಕೋಟಿಗಳಾಗಿದ್ದು ಆದಾಯ ₹2.04 ಲಕ್ಷ ಕೋಟಿಯಾದ್ದರಿಂದ ಕೊರತೆ ಹೆಚ್ಚಾಗಲಿದೆ. ಈಗಾಗಲೇ ಸರ್ಕಾರದ ಸಾಲದ ಪ್ರಮಾಣ ಹೆಚ್ಚಾಗಿದ್ದು, ಮುಂದೆ ಇನ್ನೂ ಹೊರೆಯಾಗಲಿದೆ. ನಿಧಿ ಕ್ರೋಢೀಕರಣಕ್ಕೆ ಒತ್ತು ನೀಡಲಿ.

ಡಾ.ಶ್ರೀನಿವಾಸ ರಾ. ಪಾಟೀಲ, ಎಂಬಿಎ ಪ್ರಾಧ್ಯಾಪಕರು, ಐಎಂಇಆರ್, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.