ಬೆಳಗಾವಿ: ಪ್ರತಿದಿನ ಬೆಳಿಗ್ಗೆ 7.50ರಿಂದ ಮಧ್ಯಾಹ್ನ 12.30ರವರೆಗೆ ಕಾಲೇಜಿನಲ್ಲಿ ಕಲಿಕೆ. ನಂತರ ರಾತ್ರಿ 8ರವರೆಗೆ ಬಟ್ಟೆ ಅಂಗಡಿಯಲ್ಲಿ ಕೆಲಸ. ಹೀಗೆ ಎರಡನ್ನೂ ಒಟ್ಟೊಟ್ಟಿಗೆ ನಿಭಾಯಿಸಿದ ಮೇಘಾ ಪರಶುರಾಮ ಕಟಬುಗೋಳ, ಈ ಸಲದ ಪಿಯು ದ್ವಿತೀಯ ವರ್ಷದ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ಶೇ 88.33 ಅಂಕ ಗಳಿಸಿ ಇಲ್ಲಿನ ಸರ್ಕಾರಿ ಸರದಾರ್ಸ್ ಪಿಯು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
‘ನನ್ನ ತಂದೆ ಮೃತಪಟ್ಟಿದ್ದು, ತಾಯಿ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಾರೆ. ಅಣ್ಣ ಮಾಳಿ ಕೆಲಸ ಮಾಡುತ್ತಾರೆ. ಇಬ್ಬರು ಸಹೋದರಿಯರ ವಿವಾಹವಾಗಿದೆ. ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಒಂದು ಪಾರ್ಟ್‌ಟೈಮ್ ಜಾಬ್ ಮಾಡುತ್ತಲೇ ಓದಬೇಕು. ಇಲ್ಲವೇ ಓದನ್ನೇ ನಿಲ್ಲಿಸಬೇಕು ಎಂಬ ಎರಡು ಆಯ್ಕೆಗಳಿದ್ದವು. ಹಾಗಾಗಿ ದುಡಿಯುತ್ತಲೇ ಓದಲು ನಿರ್ಧರಿಸಿ ಮುನ್ನಡೆದೆ. ನಿರಂತರ ಪ್ರಯತ್ನಕ್ಕೀಗ ಫಲ ಸಿಕ್ಕಿದೆ’ ಎಂದು ಮೇಘಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ತಾಲ್ಲೂಕಿನ ಪೀರನವಾಡಿ ನಮ್ಮೂರು. ಬೆಳಿಗ್ಗೆ 7ಕ್ಕೆ ಮನೆಯಿಂದ ಹೊರಡುತ್ತಿದ್ದೆ. ಒಮ್ಮೊಮ್ಮೆ ಸಾರಿಗೆ ಸಂಸ್ಥೆಯ ಬಸ್ ಸಿಗದಿದ್ದಾಗ, ಟಂಟಂ, ಆಟೊರಿಕ್ಷಾ ಮೂಲಕ ಬೆಳಗಾವಿಗೆ ಬರುತ್ತಿದ್ದೆ. ಇಲ್ಲಿನ ಗ್ರಂಥಾಲಯದಲ್ಲಿ ಸ್ವಲ್ಪಹೊತ್ತು ಓದಿದ ನಂತರ ಕಾಲೇಜಿಗೆ ಬಂದು ತರಗತಿಗೆ ಹಾಜರಾಗುತ್ತಿದ್ದೆ. ಮಧ್ಯಾಹ್ನ 12.30ಕ್ಕೆ ತರಗತಿ ಬಿಟ್ಟ ನಂತರ, ಎರಡು ತಾಸು ಬಿಡುವು ಕೆಲಸಕ್ಕೆ ಹೋಗುತ್ತಿದ್ದೆ. ಅಂಗಡಿಯಲ್ಲಿ ಗ್ರಾಹಕರು ಕಡಿಮೆ ಇದ್ದಾಗಲೆಲ್ಲ ಓದುತ್ತಿದ್ದೆ’ ಎಂದರು.
‘ಕಾಲೇಜು ಇದ್ದಾಗ ಅರ್ಧದಿನ ದುಡಿದರೆ, ರಜೆ ಇದ್ದಾಗ ಇಡೀದಿನ ಕೆಲಸ ಮಾಡುತ್ತಿದ್ದೆ. ಕೆಲಸದಿಂದ ಬರುವ ಹಣದಿಂದ ಪಿಯು ಶಿಕ್ಷಣ ಪಡೆದೆ. ಕಲಿಕೆಗೆ ಅಗತ್ಯವಿರುವ ಸಾಮಗ್ರಿಗಳೆಲ್ಲ ಖರೀದಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 76 ಅಂಕವಷ್ಟೇ ಸಿಕ್ಕಿತ್ತು. ಪಿಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಸಿಕ್ಕಿದ್ದು ಖುಷಿ ತಂದಿದೆ’ ಎಂದರು.
‘ಮುಂದೆ ಬಿ.ಕಾಂ ಅಥವಾ ಬಿಸಿಎ ಕೋರ್ಸ್‌ಗೆ ಪ್ರವೇಶ ಪಡೆಯಲು ಆಸಕ್ತಿ ಹೊಂದಿದ್ದೇನೆ. ನನ್ನ ದುಡಿಮೆ ಹಣದಲ್ಲೇ ಬಿ.ಕಾಂ ಕೋರ್ಸ್ ಓದಬಲ್ಲೆ. ಆದರೆ, ಬಿಸಿಎ ಕೋರ್ಸ್‌ಗೆ ಪ್ರವೇಶ ಪಡೆಯಲು ಹೆಚ್ಚಿನ ಹಣ ಬೇಕು. ಸಾರ್ವಜನಿಕರು ಅಥವಾ ಯಾವುದಾದರೂ ಕಾಲೇಜಿನವರು ನೆರವಾದರೆ, ಆ ಕೋರ್ಸ್‌ಗೆ ಪ್ರವೇಶ ಪಡೆಯುವ ಆಸೆ ಇದೆ’ ಎಂದರು.
ಸೌಕರ್ಯಗಳ ಕೊರತೆ ನೆಪವೊಡ್ಡಿ ಯುವಜನರು ಓದುವುದರಿಂದ ಹಿಂದಕ್ಕೆ ಸರಿಯಬಾರದು. ಲಭ್ಯ ಅವಕಾಶಗಳನ್ನೇ ಬಳಸಿಕೊಂಡು ಸಾಧನೆ ಮಾಡಬೇಕುಮೇಘಾ ಕಟಬುಗೋಳ, ವಿದ್ಯಾರ್ಥಿನಿ
ಛಲವಿದ್ದರೆ ಎಷ್ಟೇ ಕಷ್ಟ ಬಂದರೂ ಓದಿ ಸಾಧಿಸಬಹುದು ಎಂಬುದನ್ನು ಮೇಘಾ ನಿರೂಪಿಸಿದ್ದಾರೆ. ಯಾವುದೇ ವಿದ್ಯಾರ್ಥಿ ಕಷ್ಟಕ್ಕೆ ಕುಗ್ಗದೆ ಆತ್ಮವಿಶ್ವಾಸದಿಂದ ಓದಬೇಕುವೈ.ಎಂ.ಪಾಟೀಲ ಪ್ರಾಚಾರ್ಯ ಸರ್ಕಾರಿ ಸರದಾರ್ಸ್ ಪಿಯು ಕಾಲೇಜು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.