ADVERTISEMENT

‘ಎಎನ್‌ಎಂ ತರಬೇತಿ ಕೇಂದ್ರ ಮುಚ್ಚಿದರೆ ಆತ್ಮಹತ್ಯೆ’

ಬೆಳಗಾವಿಯಲ್ಲಿ ವಿದ್ಯಾರ್ಥಿನಿಯರಿಂದ ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯರಿಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 16:29 IST
Last Updated 12 ಜೂನ್ 2025, 16:29 IST

ಬೆಳಗಾವಿ: ‘ಇಲ್ಲಿನ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ (ಎಎನ್‌ಎಂ) ತರಬೇತಿ ಕೇಂದ್ರವನ್ನು ಮುಚ್ಚಬಾರದು. ಸರ್ಕಾರ ತನ್ನ ನಿಲುವು ಬದಲಿಸಿದ್ದರೆ ನಾವೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ವಿದ್ಯಾರ್ಥಿನಿಯರು ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯರಿಗೆ ಗುರುವಾರ ಮನವಿ ಸಲ್ಲಿಸಿದರು.

‘ಎರಡು ವರ್ಷಗಳ ಈ ಕೋರ್ಸ್‌ಗೆ 21 ವಿದ್ಯಾರ್ಥಿನಿಯರು ಜನವರಿಯಲ್ಲೇ ಪ್ರವೇಶ ಪಡೆದು, ಐದು ತಿಂಗಳಿಂದ ತರಬೇತಿ ಪಡೆಯುತ್ತಿದ್ದೇವೆ. ಆದರೆ, ಸರ್ಕಾರ ಎಎನ್‌ಎಂ ತರಬೇತಿ ಕೇಂದ್ರಗಳನ್ನು ಮುಚ್ಚಿ, ಆಂಗ್ಲ ಮಾಧ್ಯಮದಲ್ಲಿ ಮೂರು ವರ್ಷಗಳ ಅವಧಿಯ ಸ್ಟಾಫ್‌ನರ್ಸ್‌ (ಜಿಎನ್‌ಎಂ) ತರಬೇತಿ ನೀಡಲು ಮುಂದಾಗಿದೆ. ಇದರಿಂದ ಈಗಾಗಲೇ ತರಬೇತಿ ಪಡೆಯುತ್ತಿರುವ ಅವಧಿ ವ್ಯರ್ಥವಾಗುತ್ತದೆ’ ಎಂದು ದೂರಿದರು.

‘ಗ್ರಾಮೀಣ ಭಾಗದಿಂದ ಬಂದಿರುವ ನಮಗೆ ಈಗ ಕನ್ನಡ ಮಾಧ್ಯಮದಲ್ಲಿ ತರಬೇತಿ ಪಡೆಯಲು ಅನುಕೂಲವಾಗಿದೆ. ಇನ್ಮುಂದೆ ಆಂಗ್ಲ ಮಾಧ್ಯಮದಲ್ಲಿ ಜಿಎನ್‌ಎಂ ತರಬೇತಿ ಪಡೆಯಲು ಕಷ್ಟವಾಗುತ್ತದೆ. ಹಾಗಾಗಿ ನಮ್ಮ ಬ್ಯಾಚ್‌ನವರಿಗೆ ಮಾತ್ರ ಎಎನ್‌ಎಂ ತರಬೇತಿ ಪಡೆಯಲು ಅವಕಾಶ ನೀಡಬೇಕು. ಒಂದುವೇಳೆ ಈ ಕೇಂದ್ರ ಮುಚ್ಚಿದರೆ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

ಉಮಾ ಗಡದಿ, ಸಿಂಧು ಶಿದ್ನಾಳ, ಸೀಮಾ ಮರೆನ್ನವರ, ಕವಿತಾ ಚಚಡಿ, ಸುನಿತಾ ಸಂಕೆನ್ನವರ, ಗೀತಾ ಕಂಕಣವಾಡಿ, ದೀಪಾ ಅಟ್ಟಿಮಿಟ್ಟಿ, ಪ್ರತೀಕ್ಷಾ ಮಾನೆ, ಭಾಗ್ಯಶ್ರೀ ಹಂದಿಗುಂದ, ಪ್ರಿಯಾಂಕಾ ಹನಗಂಡಿ, ಮಧುಮತಿ ಹಿಟ್ಟಣಗಿ, ಗೌರವ್ವ ಯರಗಟ್ಟಿ, ಶೈಲಾ ವಡೇರ, ರೋಹಿಣಿ ಶಾಮರಾವ್‌, ಅರುಣಾ ತಾಳೂಕರ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.