ADVERTISEMENT

ಕಚೇರಿ ಸ್ಥಳಾಂತರಿಸದಿದ್ದರೆ ಉಗ್ರ ಹೋರಾಟ; ಸ್ವಾಮೀಜಿಗಳ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 15:51 IST
Last Updated 8 ಡಿಸೆಂಬರ್ 2018, 15:51 IST

ಬೆಳಗಾವಿ: ಪ್ರಮುಖ 9 ಇಲಾಖೆಗಳ ಮುಖ್ಯ ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರ ಮಾಡುವುದಾಗಿ ಘೋಷಣೆ ಮಾಡಿದ್ದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಮ್ಮ ಮಾತಿನಂತೆ ನಡೆದುಕೊಳ್ಳಬೇಕು ಹಾಗೂ ಈ ಪ್ರಕ್ರಿಯೆಗೆ ಚಳಿಗಾಲದ ಅಧಿವೇಶನದ ವೇಳೆಯಲ್ಲಿಯೇ ಚಾಲನೆ ನೀಡಬೇಕು ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಚೇರಿ ಸ್ಥಳಾಂತರದ ಜೊತೆಗೆ ಬೆಳಗಾವಿಯನ್ನು 2ನೇ ರಾಜಧಾನಿಯನ್ನಾಗಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲು ಸಿದ್ಧ ಎಂದರು.

ಉತ್ತರ ಕರ್ನಾಟಕ ಭಾಗದ ಶಾಸಕರು, ಸಚಿವರು ಎಲ್ಲ ದಿನಗಳ ಕಲಾಪದಲ್ಲಿ ಭಾಗವಹಿಸಬೇಕು. ಯಾರೊಬ್ಬರೂ ಗೈರಾಗಬಾರದು. ಇಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು ಹಾಗೂ ಪರಿಹಾರ ಕಂಡುಕೊಳ್ಳಲು ಯತ್ನಿಸಬೇಕು. ಜನರ ಧ್ವನಿಯಾಗಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

‘ನಾವು ಇಂದಿಗೂ ಸಮಗ್ರ ಕರ್ನಾಟಕದ ಪರವಾಗಿದ್ದೇವೆ. ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಈ ಹಿಂದೆ ನಡೆದಿದ್ದ ಹೋರಾಟವನ್ನು ಹೋರಾಟಗಾರರ ಮನವೊಲಿಸಿ ತಡೆದಿದ್ದೇವು. ಆದರೆ, ಈಗ ಅದೇ ಜನರು ಕೇಳುತ್ತಿದ್ದಾರೆ. ಅವರಿಗೆ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ. ಇನ್ನೆಷ್ಟು ದಿನ ಅಂತ ಹೋರಾಟ ತಡೆಹಿಡಿಯಲು ಸಾಧ್ಯ. ಅಂತಹ ಹೋರಾಟದ ಅಪಾಯವನ್ನು ಸರ್ಕಾರದ ತಂದುಕೊಳ್ಳಬಾರದು’ ಎಂದು ಹೇಳಿದರು.

ಮುತ್ನಾಳದ ಶಿವಾನಂದ ಸ್ವಾಮೀಜಿ ಮಾತನಾಡಿ, ಹೊರಗಿನ ಹೋರಾಟಕ್ಕಿಂತ ಸದನದ ಒಳಗಿನ ಹೋರಾಟ ಹೆಚ್ಚು ಪರಿಣಾಮಕಾರಿಯಾದುದು. ಶಾಸಕರು ಸದನದ ಒಳಗೆ ಉತ್ತರ ಕರ್ನಾಟಕದ ಪರ ಧ್ವನಿ ಎತ್ತುವ ಮೂಲಕ ತಮಗೆ ಮತ ನೀಡಿದ ಜನರ ಋಣ ತೀರಿಸಬೇಕು. ಇಲ್ಲದಿದ್ದರೆ, ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.

ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಮಾತನಾಡಿ, ‘ಹೋರಾಟಗಾರರು ಹಾಗೂ ಜನರ ಸಹನೆಗೂ ಒಂದು ಮಿತಿಯಿರುತ್ತದೆ ಎನ್ನುವುದನ್ನು ರಾಜ್ಯ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಇದೇ ಅಧಿವೇಶನದಲ್ಲಿ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಹೋರಾಟದ ಹಾದಿ ಹಿಡಿಯುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.