ADVERTISEMENT

ತೆಲಸಂಗ: ಯಲ್ಲಮ್ಮದೇವಿ ಜಾತ್ರೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 17:08 IST
Last Updated 12 ನವೆಂಬರ್ 2019, 17:08 IST
ತೆಲಸಂಗದ ಯಲ್ಲಮ್ಮದೇವಿ ಜಾತ್ರೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು
ತೆಲಸಂಗದ ಯಲ್ಲಮ್ಮದೇವಿ ಜಾತ್ರೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು   

ತೆಲಸಂಗ: ಇಲ್ಲಿನ ಗ್ರಾಮದೇವತೆಯಲ್ಲಮ್ಮದೇವಿ ಜಾತ್ರೆಗೆ ಮಂಗಳವಾರ ಸಂಭ್ರಮದ ಚಾಲನೆ ದೊರೆಯಿತು.

ಯಲ್ಲಮ್ಮದೇವಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಶರಣಪ್ಪ ಅವಟಿ ಮಾತನಾಡಿ, ‘ಯಲ್ಲಮ್ಮನ ಸನ್ನಿಧಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುವುದು ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾಗಿದೆ’ ಎಂದರು.

‘ಜಾತ್ರೆಗಳು ಗ್ರಾಮೀಣ ಸೊಗಡನ್ನು ಬಿಂಬಿಸಿ, ಪರಸ್ಪರ ಬಾಂಧವ್ಯ ಬೆಸೆಯುತ್ತವೆ. ಜನರಲ್ಲಿ ಭಕ್ತಿಗೆ, ಆರಾಧನೆಗೇನೂ ಕೊರತೆ ಇಲ್ಲ. ಆದರೆ, ನಡೆಗೂ–ನುಡಿಗೂ ವ್ಯತ್ಯಾಸ ಕಂಡುಬರುತ್ತಿದೆ. ಸಮಾಜಮುಖಿಯಾಗಿ ಬದುಕು ಸಾಗಿಸಿದರೆ ದೇವರಿಗೆ ನಮ್ಮ ಹರಕೆ ಸಲ್ಲುತ್ತದೆ. ಆಗ ದೇವರ ಕೃಪೆಗೂ ಪಾತ್ರರಾಗಬಹುದು’ ಎಂದು ತಿಳಿಸಿದರು.

ADVERTISEMENT

ಉಪನ್ಯಾಸಕ ವಿಶ್ವನಾಥ ಪಾಟೀಲ, ‘ಯಲ್ಲಮ್ಮದೇವಿ ಗ್ರಾಮೀಣ ಜನರ ಆರಾಧ್ಯ ದೇವತೆ. ಶ್ರದ್ಧಾ ಭಕ್ತಿಗೆ ವರ ಕರುಣಿಸುವ ಕಾಮಧೇನು’ ಎಂದರು.

ಬೆಳಿಗ್ಗೆಯಿಂದಲೇ ಭಕ್ತರು ನೆರೆದಿದ್ದರು. ಜನದಟ್ಟಣೆ ಹೆಚ್ಚಿದ್ದರಿಂದ ದರ್ಶನಕ್ಕೆ ಪರದಾಡಬೇಕಾಯಿತು. ‘ಯಲ್ಲವ್ವ ನಿನ್ನ ಪಾಲ್ಕಿ ಉಘೇ ಉಘೇ’ ಎಂದು ದೇವಿ ನಾಮಸ್ಮರಣೆ ಮಾಡುತ್ತಾ ಭಂಡಾರ ಹಾರಿಸಿ ‌ನೈವೇದ್ಯ ಅರ್ಪಿಸಿದರು.

ವಕೀಲ ಎಸ್.ಎ. ಪಾಟೀಲ, ಮುಖಂಡರಾದ ಅಪ್ಪಣ್ಣ ಮೆಣಸಂಗಿ, ಬಾಳಯ್ಯ ಮಠಪತಿ, ಅಶೋಕ ಹುಜರೆ, ಮಾಯಪ್ಪ ನಿಡೋಣಿ, ಶಂಕರ ಮೆಣಸಂಗಿ, ರಾಮು ಪೂಜಾರಿ ಇದ್ದರು.

ಬುಧವಾರ (ನ.13) ಭಕ್ತರಿಂದ ಯಲ್ಲಮ್ಮದೇವಿಗೆ ಉಡಿ ತುಂಬುವ ಕಾರ್ಯಕ್ರಮವಿದೆ. ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ರಾತ್ರಿ 9ಕ್ಕೆ ಇಲ್ಲಿನ ಪುಟ್ಟರಾಜ ಕವಿ ಗವಾಯಿಗಳ ಕಲಾ ಸಂಘದಿಂದ ಜಗದೀಶ ಖೊಬ್ರಿ ವಿರಚಿತ ‘ಹೊಟ್ಟೆಯಲ್ಲಿ ಹುಟ್ಟಲಿಲ್ಲ ತೊಟ್ಟಿಲು ತೂಗಲಿಲ್ಲ ಅರ್ಥಾತ್‌ ನೀನೆ ನನ್ನ ಮಗ’ ಸಾಮಾಜಿಕ ನಾಟಕ ಪ್ರದರ್ಶನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.