ಕೊಡ್ಲಿವಾಡ: ‘ನಾ ಕುರಿ ಕಾಯ್ತೇನರಿ. ಅಪ್ಪ ಕೂಲಿ ಮಾಡತಾನರಿ. ಅವ್ವ ಮನ್ಯಾಗ ಇರತಾಳ. ನಮ್ಮಣ್ಣ ಐಎಎಸ್ ಪಾಸ್ ಆಗ್ಯಾನಂತ ಕೇಳಿ ಆನಂದಾತು. ಅವ ಸಾಲಿ ಕಲೀಲಿ ಅಂತ ನಾನು ಕುರಿ ಕಾಯಾಕ ಶುರು ಮಾಡಿದ್ದೆ. ಮಂದಿ ಸಲುವಾಗಿ ಚಲೋ ಕೆಲಸ ಮಾಡಿದರ ಸಾಕ್ರಿ...’
ಯುಪಿಎಸ್‌ಸಿಯಲ್ಲಿ 910ನೇ ರ್‍ಯಾಂಕ್ ಪಡೆದ ಯರಗಟ್ಟಿ ತಾಲ್ಲೂಕಿನ ಕೊಡ್ಲಿವಾಡದ ಹನುಮಂತಪ್ಪ ನಂದಿ (31) ಅವರ ಕಿರಿಯ ಸಹೋದರ ಆನಂದ ಹೃದಯದ ಮಾತುಗಳಿವು.
ನಾಲ್ಕನೇ ತರಗತಿ ಮಾತ್ರ ಓದಿರುವ ಆನಂದ ಅವರಿಗೆ ಸಹೋದರ ಸಾಧನೆ ನಂಬಲೂ ಆಗುತ್ತಿಲ್ಲ. ಹನುಮಂತಪ್ಪ ಏನನ್ನು ಓದಿದ್ದಾರೆ, ಯಾವ ರ್‍ಯಾಂಕ್ ಪಡೆದಿದ್ದಾರೆ, ಮುಂದೆ ಯಾವ ಅಧಿಕಾರಿ ಆಗುತ್ತಾರೆ ಎಂಬ ಬಗ್ಗೆ ತಂದೆ, ತಾಯಿಗಳಿಗೆ ಮಾಹಿತಿಯೇ ಇಲ್ಲದಷ್ಟು ಮುಗ್ಧರು. ಅವರ ಕಣ್ಣುಗಳಲ್ಲಿ ಈಗ ಕುತೂಹಲ ಮನೆ ಮಾಡಿದೆ.
ಮಂಗಳವಾರ ಮಧ್ಯಾಹ್ನದ ವೇಳೆಗೆ ಹನುಮಂತಪ್ಪ ಅವರು ಯುಪಿಎಸ್‌ಸಿ ರ್‍ಯಾಂಕ್ ಪಡೆದ ವಿಷಯ ಮುಟ್ಟಿದ್ದೇ ತಡ, ಇಡೀ ಊರಿನಲ್ಲಿ ಸಂಭ್ರಮ ಮನೆ ಮಾಡಿತು. ಕಡುಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಹನುಮಂತಪ್ಪ ಅವರ ಪ್ರತಿಭೆ, ಛಲ, ಪರಿಶ್ರಮ ಈ ಊರಿಗೇ ಹಿರಿಮೆ ತಂದಿದೆ.
ತಂದೆ ಯಲ್ಲಪ್ಪ, ತಾಯಿ ಕಾಳವ್ವ ಅನಕ್ಷರಸ್ಥರು. ಪರಿಶಿಷ್ಟ ಪಂಗಡಕ್ಕೆ ಸೇರಿದ ಇವರ ಕುಟುಂಬ ಗ್ರಾಮದಿಂದ ದೂರದಲ್ಲಿ ಹೊಲದಲ್ಲೇ ಮನೆ ಕಟ್ಟಿಕೊಂಡು ವಾಸವಾಗಿದೆ. ಕೇವಲ 2 ಎಕರೆ ಜಮೀನು ಇದ್ದ ಯಲ್ಲಪ್ಪ ಬೇಸಾಯ ಮಾಡುತ್ತಾರೆ. ಅಣ್ಣನ ಓದಿನ ಸಲುವಾಗಿ ಆನಂದ ಅವರು ನಾಲ್ಕನೇ ತರಗತಿಗೆ ಓದು ನಿಲ್ಲಿಸಿ, ಹೆತ್ತವರಿಗೆ ನೆರವಾಗಲು ಮುಂದಾದರು. ಓದುವ ಹಂಬಲವಿದ್ದ ಹನುಮಂತಪ್ಪ ಮಾತ್ರ ಛಲ ಬಿಡದೇ ಮುಂದುವರಿದರು.
1ರಿಂದ 7ನೇ ತರಗತಿವರೆಗೆ ಕೊಡ್ಲಿವಾಡದ ಸರ್ಕಾರಿ ಶಾಲೆಯಲ್ಲಿ, 8ರಿಂದ 10ನೇ ತರಗತಿಯವರೆಗೆ ಸತ್ತಿಗೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯು ರ್‍ಯಾಂಕ್ ಸಮೇತ ಪಾಸಾದರು. ಬೆಳಗಾವಿಯ ಜಿಐಟಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಮುಗಿಸಿದ ಬಳಿಕ, ಯುಪಿಎಸ್‌ಸಿಗೆ ತಯಾರಿ ನಡೆಸಿದರು.
‘ಅಣ್ಣ ಐಎಎಸ್ ಕಲಿತಿನಿ, ಜಿಲ್ಲಾಧಿಕಾರಿ ಆಕ್ಕೇನಿ ಅಂತ ಬೆಂಗಳೂರಿಗೆ ಕೋಚಿಂಗ್ ಹೋದ. ಮೂರು ವರ್ಷದಿಂದ ನಾನೇ ಅವನ ಖರ್ಚು ನೋಡಿಕೊಳ್ಳುತ್ತೇನೆ. ಕುರಿಮರಿಗಳನ್ನು ಮಾರಿ ಪ್ರತಿ ತಿಂಗಳು ₹15 ಸಾವಿರ ಕಳುಹಿಸುತ್ತಿದ್ದೆ. ಅದರಲ್ಲೇ ಅವನು ಊಟ, ವಸತಿ, ಕಲಿಕೆ ಸಂಬಾಳಿಸಿಕೊಳ್ಳುತ್ತಿದ್ದ’ ಎಂದು ಆನಂದ ನೆನೆದರು.
8ನೇ ಪ್ರಯತ್ನದಲ್ಲಿ ಸಿಕ್ಕ ಯಶಸ್ಸು!
‘ನಾನು ಸತತ 8 ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದೇನೆ. 8ನೇ ಬಾರಿಗೆ 910ನೇ ರ್‍ಯಾಂಕ್ ಸಿಕ್ಕಿದೆ. ಇದಕ್ಕೆ ತೃಪ್ತಿ ಇಲ್ಲ. 500ನೇ ರ್‍ಯಾಂಕ್ ಒಳಗೇ ಬರಬೇಕು ಎಂಬುದು ನನ್ನ ಗುರಿ. ಆಗ ಮಾತ್ರ ಜಿಲ್ಲಾಧಿಕಾರಿಯಂಥ ಹುದ್ದೆಗೇರಲು ಸಾಧ್ಯ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು ಹನುಮಂತಪ್ಪ. ಕಳೆದ ವರ್ಷ ಅವರು ಮದುವೆಯಾಗಿದ್ದಾರೆ. ಪತ್ನಿ ಕೂಡ ಇನ್ನೂ ಶಿಕ್ಷಣ ಪಡೆಯುತ್ತಿದ್ದಾರೆ. ಹನುಂತಪ್ಪಗೆ ಈಗ 31 ವರ್ಷ ವಯಸ್ಸು. ಇನ್ನೂ ಆರು ವರ್ಷ ಯುಪಿಎಸ್‌ಸಿ ಬರೆಯಲು ಅವರಿಗೆ ಅವಕಾಶವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.